
ಮಡಿಕೇರಿ NEWS DESK ಜ.9 : ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸಕೋಟೆಯಲ್ಲಿ ನಿವೇಶನ ರಹಿತರಿಗಾಗಿ ಮೀಸಲಿಟ್ಟಿರುವ ಜಾಗದಲ್ಲಿ, ಈಗಾಗಲೇ ಅಲ್ಲಿ ನೆಲೆ ನಿಂತಿರುವ 76 ಕುಟುಂಬಗಳಿಗೆ ಶೀಘ್ರ 50*40 ಅಡಿ ಅಳತೆಯ ನಿವೇಶನ ಮುಂಜೂರು ಮಾಡಬೇಕೆಂದು ಕೊಡಗು ಜಿಲ್ಲಾ ಬುಡಕಟ್ಟು ಕಾರ್ಮಿಕರ ಸಂಘ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಸಿ.ಶೈಲೇಂದ್ರ ಅವರು ನಿವೇಶನಕ್ಕಾಗಿ ಆಗ್ರಹಿಸಿ ಜ.12ರಿಂದ ಅಮ್ಮತ್ತಿ ಹೊಸೂರು ಪಂಚಾಯ್ತಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ತಿಳಿಸಿದರು. ಹೊಸೂರು ಪಂಚಾಯ್ತಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಿರುವ ಲೈನ್ ಮನೆಯ ಬಡ ಕುಟುಂಬಗಳಿಗೆ ನಿವೇಶನ ಮತ್ತು ವಸತಿ ಒದಗಿಸಲು ಹೊಸಕೋಟೆಯಲ್ಲಿ 3.30 ಏಕರೆ ಸರ್ಕಾರಿ ಜಾಗವನ್ನು ಗುರುತಿಸಲಾಗಿತ್ತು. ಅದನ್ನು ಸಮಗ್ರ ಗಿರಿಜನ ಯೋಜನೆ(ಐಟಿಡಿಪಿ) ಇಲಾಖೆಯ ಹೆಸರಿಗೆ ಈಗಾಗಲೇ ವರ್ಗಾಯಿಸಲಾಗಿದೆ. ಸೂಚಿತ ಜಾಗದಲ್ಲಿ ಕನಿಷ್ಟ ಮೂಲ ಸೌಲಭ್ಯಗಳು ಇಲ್ಲದೆ 76 ಕುಟುಂಬಗಳು ಪ್ಲಾಸ್ಟಿಕ್ ಹೊದಿಕೆಯ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಸಂಕಷ್ಟದ ಜೀವನ ಸಾಗಿಸುತ್ತಿರುವ ನಿವೇಶನ ರಹಿತ ಬುಡಕಟ್ಟು ಕುಟುಂಬಗಳಿಗೆ ಇಲ್ಲಿಯವರೆಗೆ ಜಾಗವನ್ನು ಹಸ್ತಾಂತರಿಸಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು ಸೂಕ್ತ ಸ್ಪಂದನ ದೊರೆತ್ತಿಲ್ಲವೆಂದು ಆರೋಪಿಸಿದರು. *110 ಮಂದಿಗೆ ಜಾಗ* ಅರ್ಹ 76 ಮಂದಿಗೆ 50*40 ಅಡಿ ಅಳತೆಯ ಜಾಗವನ್ನು ಒದಗಿಸಲಾಗುತ್ತದೆ ಎಂದು ಈ ಹಿಂದೆ ಅಧಿಕಾರಿಗಳು ತಿಳಿಸಿದ್ದರು. ಆದರೆ ಪ್ರಸ್ತುತ ಅಧಿಕಾರಿಗಳು ಕೇವಲ 30*20 ಅಡಿ ಅಳತೆಯ ನಿವೇಶನವನ್ನು 110 ಮಂದಿಗೆ ನೀಡುವುದಾಗಿ ಹೇಳುತ್ತಿದ್ದಾರೆ. ಇಷ್ಟು ಸಣ್ಣ ಅಳತೆಯ ಜಾಗವನ್ನು ಫಲಾನುಭವಿಗಳಿಗೆ ನೀಡುವುದಕ್ಕೆ ನಮ್ಮ ಒಪ್ಪಿಗೆ ಇಲ್ಲ. ಹಿಂದೆ ತಿಳಿಸಿರುವಂತೆ 50*40 ಅಡಿ ಅಳತೆಯ ನಿವೇಶನವನ್ನೇ ಒದಗಿಸಬೇಕು. ಸಣ್ಣ ಅಳತೆಯ ಜಾಗವನ್ನು ನಿಗದಿ ಪಡಿಸಿ, ಪ್ರಸ್ತುತ ಇರುವ ನಿವೇಶನ ರಹಿತ ಕುಟುಂಬಗಳೊಂದಿಗೆ, ಹೊರ ಪ್ರದೇಶದಲ್ಲಿರುವ ಇತರ ನಿವೇಶನ ರಹಿತರಿಗೆ ಅಲ್ಲಿ ಜಾಗ ನೀಡಬಾರದು ಎಂದು ಆಗ್ರಹಿಸಿದರು. ಗೋಣಿಕೊಪ್ಪಲು ಸಮೀಪದ ಕಳತ್ಮಾಡು ಗ್ರಾಮದಲ್ಲಿ ಈಗಾಗಲೇ 114 ಬುಡಕಟ್ಟು ಸಮುದಾಯದ ನಿವೇಶನ ರಹಿತ ಕುಟುಂಬಗಳಿಗೆ 40*30 ಅಡಿ ವಿಸ್ತೀರ್ಣದ ನಿವೇಶನ ಮತ್ತು ವಸತಿಯನ್ನು ಒದಗಿಸಲಾಗಿದೆ. ಇದೀಗ ಹೊಸಕೋಟೆಯಲ್ಲಿ ಇದಕ್ಕೂ ಕಡಿಮೆ ವಿಸ್ತೀರ್ಣದ ನಿವೇಶನ ಒದಗಿಸುವ ಪ್ರಯತ್ನ ಅಧಿಕಾರಿಗಳಿಂದ ನಡೆಯುತ್ತಿದೆ ಎಂದು ಅವರು ಟೀಕಿಸಿದರು. ಬುಡಕಟ್ಟು ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವೈ.ಬಿ.ಗಪ್ಪು ಅವರು ಮಾತನಾಡಿ, ಹೊಸಕೋಟೆಯಲ್ಲಿ ಅತ್ಯಂತ ಸಣ್ಣ 30*20 ಅಡಿ ನಿವೇಶನ ಮತ್ತು ಮನೆಯನ್ನು ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇಷ್ಟು ಚಿಕ್ಕ ಜಾಗದಲ್ಲಿ ನಿರ್ಮಿಸುವ ಮನೆಯಲ್ಲಿ ಕುಟುಂಬಗಳ ನೆಮ್ಮದಿಯ ಬದುಕು ಸಾಧ್ಯವಾದೀತೆ, ನಿರ್ಮಿಸುವ ಮನೆ ಏನು ಗುಬ್ಬಚ್ಚಿ ಗೂಡೆ ಎಂದು ಪ್ರಶ್ನಿಸಿದರು. ಫಲಾನುಭವಿಗಳಿಗೆ 50*40 ಅಡಿ ವಿಸ್ತಿರ್ಣದ ನಿವೇಶನವನ್ನೇ ನೀಡಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಬುಡಕಟ್ಟು ಕಾರ್ಮಿಕರ ಸಂಘದ ಕಾರ್ಯದರ್ಶಿ ಜೆ.ಸಿ.ಲಲಿತಾ, ಖಜಾಂಚಿ ಪಿ.ಟಿ.ಜ್ಯೋತಿ, ಕಾರ್ಯಕರ್ತರಾದ ಎ.ಬಿ.ವಿನಯ್ ಕುಮಾರ್ ಹಾಗೂ ಜೆ.ಟಿ.ಅಯ್ಯಪ್ಪ ಉಪಸ್ಥಿತರಿದ್ದರು.








