
ಮಡಿಕೇರಿ NEWS DESK ಜ.10 : ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದು ‘ಫ್ರೆಂಡ್ ರಿಕ್ವೆಸ್ಟ್’ ಕಳುಹಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರು ಪ್ರತಿಕ್ರಿಯೆ ನೀಡಬಾರದು ಎಂದು ಮಡಿಕೇರಿ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಕೊಡಗು ಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡ ಬಿಂದುಮಣಿ ಅವರ ಹೆಸರನ್ನು ದುರ್ಬಳಕೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಿಂದು ಮಣಿ ಐಪಿಎಸ್, ಎಸ್‌ಪಿ ಕೊಡಗು ಡಿಸ್ಟ್ರಿಕ್ಟ್ ಎಂದು ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಹಲವರಿಗೆ ‘ಫ್ರೆಂಡ್ ರಿಕ್ವೆಸ್ಟ್’ ಕಳುಹಿಸಲಾಗಿದೆ. ಜ.9 ರಂದು ಇದು ವ್ಯಾಪಕವಾಗಿದ್ದು, ಹಲವು ಪತ್ರಕರ್ತರು ಹಾಗೂ ಪ್ರಮುಖ ವ್ಯಕ್ತಿಗಳಿಗೂ ‘ರಿಕ್ವೆಸ್ಟ್’ ಹೋಗಿದೆ. ಕೆಲವರು ಸಂಶಯಗೊಂಡು ಪ್ರೊಫೈಲ್ ಪರಿಶೀಲಿಸಿದಾಗ ಲಾಕ್ ಆಗಿರುವುದು ಕಂಡು ಬಂದಿದೆ. ಮತ್ತೆ ಕೆಲವರು ‘ಫ್ರೆಂಡ್ ರಿಕ್ವೆಸ್ಟ್’ ಗೆ ಒಪ್ಪಿಗೆ ಸೂಚಿಸಿದ್ದಾರೆ.
ಈ ವಿಚಾರ ಮಡಿಕೇರಿ ಪೊಲೀಸರ ಗಮನಕ್ಕೆ ಬಂದಿದ್ದು, ಇದೊಂದು ನಕಲಿ ಫೇಸ್ ಬುಕ್ ಖಾತೆ ಎಂದು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಪ್ರತಿಕ್ರಿಯೆ ನೀಡಬಾರದು ಎಂದು ಮನವಿ ಮಾಡಿರುವ ಪೊಲೀಸರು ಅಧಿಕಾರಿಗಳು ಕಿಡಿಗೇಡಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.







