
ಮಡಿಕೇರಿ ಜ.10 NEWS DESK : ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಉತ್ಸವ ಸಮಿತಿ ವತಿಯಿಂದ ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಯಲ್ಲಿ 36ನೇ ವರ್ಷದ ಮಕರ ಸಂಕ್ರಾಂತಿ ಮಹೋತ್ಸವ ಜ.14ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಟಿ.ಕೆ.ಸುಧೀರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂರ್ಯನು ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ‘ಉತ್ತರಾಯಣ’ ಪುಣ್ಯಕಾಲದ ಮಕರಸಂಕ್ರಾಂತಿ ಉತ್ಸವ ಅತ್ಯಂತ ವಿಶೇಷವಾದದ್ದು. ಮಕರ ಸಂಕ್ರಾಂತಿಯ ದಿನದಿಂದ ಸೂರ್ಯನ ಚಲನೆ ದಕ್ಷಿಣದಿಂದ ಉತ್ತರದಿಕ್ಕಿನತ್ತ ಸರಿಯಲಾರಂಭಿಸುತ್ತದೆ. ವೈಜ್ಞಾನಿಕವಾಗಿಯು ಇದೊಂದು ಮಹತ್ವದ ದಿನ ಮತ್ತು ಹಬ್ಬವಾಗಿದೆ ಎಂದರು.
ಮಕರಸಂಕ್ರಾಂತಿಯ ಮುನ್ನಾ ದಿನವಾದ ಜ.13 ರಂದು ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ತುಪ್ಪಾಭಿಷೇಕ ಇತ್ಯಾದಿ ಸೇವೆ ನಡೆಯಲಿದೆ. ಜ.14ರ ಬೆಳಗ್ಗೆ 6.30 ಗಂಟೆಗೆ ನಿರ್ಮಾಲ್ಯ ವಿಸರ್ಜನೆ, ಉಷಾಪೂಜೆ, 7 ಗಂಟೆಗೆ ಮುತ್ತಪ್ಪ ಮತ್ತು ಸುಬ್ರಹ್ಮಣ್ಯ ದೇವರ ಪೂಜೆ, 7.30ರಿಂದ ಪಂಚಾಮೃತಾಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಎಳನೀರು ಅಭಿಷೇಕ, ಪುಷ್ಪಾರ್ಚನೆ, ತುಲಾಭಾರ ಸೇವೆ, ಬೆಳಿಗ್ಗೆ 8.30ಕ್ಕೆ ಶ್ರೀ ಕುಟ್ಟಿಚಾತನ್ ವೆಳ್ಳಾಟಂ, 9 ಗಂಟೆಗೆ ಮುತ್ತಪ್ಪ ವೆಳ್ಳಾಟಂ, 10 ಗಂಟೆಗೆ ಶ್ರೀ ಪೋದಿ ದೇವರ ವೆಳ್ಳಾಟಂ ಜರುಗಲಿದೆ. ಬೆಳಗ್ಗೆ 7.30 ರಿಂದ 8.10ರವರೆಗೆ ಅಭಿಷೇಕ ಪೂಜೆ ನಡೆಸುವ ಭಕ್ತಾದಿಗಳಿಗೆ ಎಳನೀರು ಮತ್ತು ಹಾಲನ್ನು ದೇವಸ್ಥಾನದ ವತಿಯಿಂದಲೇ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 10.30 ಗಂಟೆಗೆ ಶ್ರೀ ಅಯ್ಯಪ್ಪ ದೇವರ ಅಲಂಕಾರ ಪೂಜೆ, 11 ಗಂಟೆಗೆ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಶ್ರೀ ಗುಳಿಗ ದೇವರ ವೆಳ್ಳಾಟಂ, 12.30 ಗಂಟೆಗೆ ಮಹಾಮಂಗಳಾರತಿ, ಅನ್ನಸಂತರ್ಪಣೆ ನೆರವೇರಲಿದೆ. ಅಂದು ಸಂಜೆ 6ರಿಂದ ಶ್ರೀ ಮುತ್ತಪ್ಪ ಮಹಿಳಾ ವೇದಿಕೆ, ಶ್ರೀ ಕೋದಂಡ ರಾಮ ಮಹಿಳಾ ವೇದಿಕೆ ಮತ್ತು ವಾಸವಿ ಮಹಿಳಾ ವೇದಿಕೆ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 7ರಿಂದ ಅಲಂಕಾರ ಪೂಜೆ ಮತ್ತು ಪಡಿಪೂಜೆ ಹಾಗೂ ರಾತ್ರಿ 8 ಗಂಟೆಗೆ ದೀಪಾರಾಧನೆಯ ಬಳಿಕ ಪ್ರಸಾದ ವಿತರಣೆ ನಡೆಯಲಿದೆ ಎಂದು ಸುಧೀರ್ ವಿವರಿಸಿದರು. ಅನ್ನಸಂತರ್ಪಣೆಗೆ ಅಕ್ಕಿ, ತರಕಾರಿ ಇತ್ಯಾದಿ ವಸ್ತುಗಳನ್ನು ನೀಡಲಿಚ್ಛಿಸುವವರು ಅವುಗಳನ್ನು ಮುಂಚಿತವಾಗಿ ನೀಡಬೇಕು. ಅಭಿಷೇಕಕ್ಕೆ ಹಾಲು, ಜೇನು, ಎಳನೀರು ಇತ್ಯಾದಿಗಳನ್ನು ನೀಡುವ ಭಕ್ತಾದಿಗಳು ಜ.13 ರಂದು ಬೆಳಿಗ್ಗೆ 7 ಗಂಟೆಗೆ ಮೊದಲು ದೇವಾಲಯಕ್ಕೆ ತಲುಪಿಸಬೇಕು. ಸಂಕಲ್ಪ ಸೇವೆ ಮಾಡುವ ಭಕ್ತಾದಿಗಳು ಜ.14 ರಂದು ಬೆಳಿಗ್ಗೆ 7 ಗಂಟೆಗೆ ಉಪಸ್ಥಿತರಿರುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿರುವ ಶ್ರೀ ಅಯ್ಯಪ್ಪ ದೇವಸ್ಥಾನದ ಸಂಸ್ಥಾಪಕ ಹಾಗೂ ಉತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ಎಂ.ಜಿ.ಪಾಟ್ಕರ್, ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನೋದ್ ವಿ.ಎಸ್., ಸಲಹೆಗಾರರುಗಳಾದ ಜಯಂತಿ ಶೆಟ್ಟಿ, ಸದಾಶಿವ ಶೆಟ್ಟಿ ಹಾಗೂ ಪೂವಪ್ಪ ಉಪಸ್ಥಿತರಿದ್ದರು.









