
ಮಡಿಕೇರಿ NEWS DESK ಜ.11 : ಜಮ್ಮಾಬಾಣೆ ತಿದ್ದುಪಡಿ ವಿಧೇಯಕದ ಕುರಿತು ಜನರಿಗೆ ತಪ್ಪು ಮಾಹಿತಿ ನೀಡುವುದನ್ನು ನಿಲ್ಲಿಸಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಮಾಜಿ ಶಾಸಕದ್ವಯರಿಗೆ ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಅವರುಗಳು ರಾಜಕೀಯ ಕಾರಣಕ್ಕಾಗಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಜಮ್ಮಾ ಹಿಡುವಳಿದಾರರು ಎದುರಿಸುತ್ತಿರುವ ಸಮಸ್ಯೆಯನ್ನು ಇತ್ಯರ್ಥಪಡಿಸಲು ನಾನು, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ತಿದ್ದುಪಡಿ ವಿಧೇಯಕದ ಮಂಡನೆಗೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲರ ನೆರವನ್ನು ಪಡೆದಿದ್ದೇವೆ ಎಂದರು.
ಕೊಡಗಿನ ಜಮ್ಮಾಬಾಣೆ ಸಮಸ್ಯೆಯ ವಿವರಗಳನ್ನು ಕಲೆ ಹಾಕಿ ಚಕ್ಕೆರ ಪೂವಯ್ಯ ಹಾಗೂ ಕರ್ನಾಟಕ ಸರಕಾರದ ನಡುವಿನ ಕೇಸ್ ನಲ್ಲಿ ಎ.ಕೆ.ಸುಬ್ಬಯ್ಯ ಅವರು ವಾದ ಮಂಡನೆ ಮಾಡಿದ ಪರಿಣಾಮ 1993 ರಲ್ಲಿ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಪ್ರಸ್ತುತ ಜಮ್ಮಾ ತಿದ್ದುಪಡಿ ವಿಧೇಯಕವನ್ನು ಆಡಳಿತ ಪಕ್ಷದ ಸದಸ್ಯರ ಜೊತೆಗೆ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಡಾ.ಅಶ್ವಥ್ ನಾರಾಯಣ ಗೌಡ, ಅರವಿಂದ್ ಬೆಲ್ಲದ್, ಅರಗ ಜ್ಞಾನೇಂದ್ರ ಸೇರಿದಂತೆ ಅನೇಕರು ಹಾಗೂ ಕೊಡಗಿನ ಜಮ್ಮಾ ಹಿಡುವಳಿದಾರರು ಪಕ್ಷಾತೀತವಾಗಿ ಸ್ವಾಗತಿಸಿದ್ದಾರೆ.
ಆದರೆ ಆರಂಭದಲ್ಲಿ ಮೌನವಾಗಿದ್ದ ಮಾಜಿ ಶಾಸಕದ್ವಯರು ಈಗ ವಿರೋಧ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಎ.ಎಸ್.ಪೊನ್ನಣ್ಣ ಪ್ರಶ್ನಿಸಿದರು.
18-12-1996ರಲ್ಲಿ ಜಮ್ಮಾಬಾಣೆ ಕಂದಾಯ ನಿಗದಿಗೆ ಸರಕಾರ ಸುತ್ತೋಲೆ ಹೊರಡಿಸಿತ್ತು. 2006 ರಲ್ಲಿ ಕಂದಾಯ ಕಾರ್ಯದರ್ಶಿ ಜಾಮದಾರ್ ಅವರು ಜಮ್ಮಾಬಾಣೆ ಸರಕಾರದ್ದು ಎಂದು ಸುತ್ತೋಲೆ ಹೊರಡಿಸಿದ್ದು, ಆ ಸಂದರ್ಭ ವಿಧಾನ ಪರಿಷತ್ ಸದಸ್ಯರಾಗಿದ್ದ ಸಿ.ಎಸ್.ಅರುಣ್ ಮಾಚಯ್ಯ ಅವರು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರಿದ ಪರಿಣಾಮ ಜಾಮದಾರ್ ಹೊರಡಿಸಿದ ಸುತ್ತೋಲೆಯನ್ನು ರದ್ದು ಪಡಿಸಲಾಗಿತ್ತು.
11-2-2010 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸೊಪ್ಪಿನ ಬೆಟ್ಟ, ಕುಮ್ಕಿ ಜಮೀನು, ಗೋಮಾಳ ಮುಂತಾದ ಸರಕಾರಿ ಜಮೀನಿನ ವ್ಯಾಪ್ತಿಗೆ ಜಮ್ಮಾಬಾಣೆ ಸೇರ್ಪಡೆಗೊಳಿಸಿ ಆದೇಶ ಹೊರಡಿಸಲಾಗಿತ್ತು. ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆ ಆದೇಶ 3-5-2010 ರಂದು ರದ್ದಾಗಿತ್ತು. ಈ ಹಿಂದೆಯೇ ಎಲ್ಲಾ ಸರಿ ಮಾಡಿದ್ದೇವೆ ಎಂದು ಕೆ.ಜಿ.ಬೋಪಯ್ಯನವರು ಹಾಗೂ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದ್ದಾರೆ. ಹಾಗಾದರೆ ಕೊಡಗಿನಲ್ಲಿ 22941 ಎಕರೆ ಜಮ್ಮಾಬಾಣೆಗೆ ಇನ್ನೂ ಯಾಕೆ ಕಂದಾಯ ನಿಗದಿಯಾಗಿಲ್ಲ ಎಂದು ಎ.ಎಸ್.ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಮಾತನಾಡಿ ಪ್ರತಿನಿತ್ಯ ತಮ್ಮನ್ನು ಭೇಟಿ ಮಾಡಲು ಬರುವ ನಾಗರಿಕರಲ್ಲಿ ಅನೇಕರು ತಮಗೆ ತಮ್ಮ ಜಮೀನು ದಾಖಲೆ ಆಗಿಲ್ಲ. ಜಮ್ಮಾಬಾಣೆ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡುತ್ತಿದ್ದರು. ತಾವು ಹಾಗೂ ಪೊನ್ನಣ್ಣ ಅವರು ಈ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂಬ ಧ್ಯೇಯದಿಂದ ಸರಕಾರಕ್ಕೆ ಒತ್ತಡ ತಂದಿದ್ದೇವೆ. ಅಭಿವೃದ್ಧಿ ಕೆಲಸಗಳನ್ನು ಜನರ ಅಪೇಕ್ಷೆಯಂತೆ ಮಾಡುತ್ತಿದ್ದೇವೆ. ಆದರೆ ಮಾಜಿ ಶಾಸಕರು ಅದು ನಾವು ಮಾಡಿದ್ದು, ಇದು ನಾವು ಮಾಡಿದ್ದು ಎಂದು ಹೇಳುವ ಮೂಲಕ ಅಪಹಾಸ್ಯಕ್ಕೆ ಒಳಗಾಗುತ್ತಿದ್ದಾರೆ. ಮಾಜಿ ಶಾಸಕರು ಹಿರಿಯರು, ಅನುಭವಿಗಳು ಆಗಿದ್ದಾರೆ. ಅಪಪ್ರಚಾರ ಮಾಡುವ ಬದಲು ಸಲಹೆ ಮತ್ತು ಮಾರ್ಗದರ್ಶನ ನೀಡಲಿ ಎಂದು ಹೇಳಿದರು.
ಜಮ್ಮಾ ತಿದ್ದುಪಡಿ ವಿಧೇಯಕ ಮಂಡನೆಗೆ ನೆರವು ನೀಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಗೆ ಜಿಲ್ಲೆಯ ಜನರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಡಾ.ಮಂತರ್ ಗೌಡ ಅವರು ಜಮ್ಮಾಬಾಣೆ ಸಮಸ್ಯೆಯ ಪರಿಹಾರದ ರೀತಿಯಲ್ಲಿ ಸಿ ಮತ್ತು ಡಿ ಭೂಮಿಯ ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ವಕ್ತಾರ ಹೆಚ್.ಎಸ್.ಚಂದ್ರಮೌಳಿ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಡಿಸಿಸಿ ಉಪಾಧ್ಯಕ್ಷರಾದ ಕೆ.ಎಂ.ಲೋಕೇಶ್, ಅಬ್ದುಲ್ ರೆಹಮಾನ್, ಜಿಲ್ಲಾ ವಕ್ತಾರ ತೆನ್ನಿರ ಮೈನಾ ಹಾಗೂ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು ಉಪಸ್ಥಿತರಿದ್ದರು.








