
ಮಡಿಕೇರಿ ಜ.13 NEWS DESK : ನವಜಾತ ಶಿಶುಗಳ ಸಂರಕ್ಷಣೆಗೆ ಪೂರಕವಾಗಿ ‘ತಾಯಿಯ ಎದೆಹಾಲು ಸಂಗ್ರಹ ಕೇಂದ್ರ’ಗಳನ್ನು ತೆರೆಯುವ ನಿಟ್ಟಿನಲ್ಲಿ ರೋಟರಿ ಸೇವಾ ಸಂಸ್ಥೆ ಪ್ರಥಮ ಆದ್ಯತೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆಯೆಂದು ರೋಟರಿ ಜಿಲ್ಲಾ ರಾಜ್ಯಪಾಲರಾದ ಪಿ.ಕೆ.ರಾಮಕೃಷ್ಣ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಕಷ್ಟು ಬಾರಿ ನವಜಾತ ಶಿಶುಗಳು ಅಗತ್ಯ ಪೋಷಕಾಂಶಯುಕ್ತ ಹಾಲಿನ ಕೊರತೆಯಿಂದ ಕೊನೆಯುಸಿರೆಳೆಯುತ್ತವೆ. ನವಜಾತ ಶಿಶುಗಳ ರಕ್ಷಣೆಗೆ ಕೃತಕ ಹಾಲು ಸಹಕಾರಿಯಾಗದಿರುವುದನ್ನು ಮನಗಂಡ ರೋಟರಿ ಸಂಸ್ಥೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಹಾಗೂ ಮಂಗಳೂರಿನಲ್ಲಿ ‘ತಾಯಿ ಎದೆ ಹಾಲು ಸಂಗ್ರಹ ಕೇಂದ್ರ’ವನ್ನು ತೆರೆದಿದೆ. ಇವುಗಳ ಮೂಲಕ ಈಗಾಗಲೆ 436 ನವಜಾತ ಶಿಶುಗಳು ಪ್ರಯೋಜನವನ್ನು ಪಡೆದುಕೊಂಡಿರುವುದಾಗಿ ತಿಳಿಸಿದರು. ರಾಜ್ಯ ಸರ್ಕಾರವು ನವಜಾತ ಶಿಶುಗಳ ರಕ್ಷಣೆಯ ನಿಟ್ಟಿನಲ್ಲಿ ಆಸಕ್ತವಾಗಿರುವುದಲ್ಲದೆ, ಪ್ರತಿ ಜಿಲ್ಲಾ ಕೇಂದ್ರದ ಆಸ್ಪತ್ರೆಯಲ್ಲಿ ‘ತಾಯಿಯ ಎದೆಹಾಲು ಸಂಗ್ರಹ ಕೇಂದ್ರ’ವನ್ನು ತೆರೆಯುವ ನಿಟ್ಟಿನ ಚಿಂತನೆಗಳನ್ನು ನಡೆಸಿದೆಯೆಂದು ಅವರು ಹೇಳಿದರು. :: ಜೀವ ರಕ್ಷಣೆಗೆ ಅಗತ್ಯ ಮಾರ್ಗದರ್ಶನ :: ಹೃದಯಾಘಾತದ ಸಂದರ್ಭ ಸಂಕಷ್ಟದಲ್ಲಿರುವ ವ್ಯಕ್ತಿಯ ಜೀವ ರಕ್ಷಣೆಗೆ ಪೂರಕವಾದ ಪ್ರಥಮ ಚಿಕಿತ್ಸಾ ಕ್ರಮಗಳ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳ ಬಗ್ಗೆ ರೋಟರಿ ಕಾರ್ಯನಿರತವಾಗಿದೆ. ಈ ನಿಟ್ಟಿನಲ್ಲಿ ಆಯಾ ಪ್ರದೇಶದ ಜನರಲ್ಲಿ ಹಾಗೂ ಆಟೋ ರಿಕ್ಷಾ ಚಾಲಕರಿಗೆ ಮಾಹಿತಿ ಒದಗಿಸುವ ಕಾರ್ಯಗಳನ್ನು ನಡೆಸಲಾಗುತ್ತಿದೆಯೆಂದು ರಾಮಕೃಷ್ಣ ಅವರು ತಿಳಿಸಿದರು. :: ಪೋಲಿಯೋ ಲಸಿಕಾ ಕಾರ್ಯಕ್ರಮ :: ಅಂತರಾಷ್ಟ್ರೀಯ ರೋಟರಿ ಫೌಂಡೇಶನ್ ಸಂಸ್ಥೆಯು ವಿಶ್ವದಿಂದಲೆ ಪೋಲೀಯೋವನ್ನು ನಿರ್ಮೂಲನ ಮಾಡಬೇಕೆನ್ನುವ ನಿಟ್ಟಿನಲ್ಲಿ ‘ಪಲ್ಸ್ ಪೋಲಿಯೋ’ ಕಾರ್ಯಕ್ರಮವನ್ನು ವಿಶ್ವದಾಂದ್ಯಂತ ನಡೆಸಲು ಅಗತ್ಯ ಹಣಕಾಸನ್ನು ಒದಗಿಸಿಕೊಂಡು ಬಂದಿದೆ. ಭಾರತದಲ್ಲಿ ಪೋಲಿಯೋ ಪ್ರಕರಣಗಳು ಇಲ್ಲವಾದರು, ನೆರೆಯ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ 59 ಪೋಲಿಯೋ ಪ್ರಕರಣಗಳು ದಾಖಲಾಗಿದೆ. ಈ ಹಿನ್ನೆಲೆ ಭಾರvದಲ್ಲಿ ಪೋಲೀಯೋ ಲಸಿಕಾ ಕಾರ್ಯಕ್ರಮ ಮುಂದುರಿಸಲಾಗಿದೆಯೆಂದು ಮಾಹಿತಿ ನೀಡಿದರು. ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲ ದಿಲನ್ ಚಂಗಪ್ಪ ಅವರು ಮಾತನಾಡಿ, ಹೆಣ್ಣು ಮಕ್ಕಳಲ್ಲಿನ ‘ಗರ್ಭ ಕಂಠದ ಕ್ಯಾನ್ಸರ್’ ತಡೆಗೆ ಪೂರಕವಾಗಿ ರೋಟರಿ ಸಂಸ್ಥೆಯು ವಿವಿಧ ಶಾಲೆಗಳಲ್ಲಿ ಮಕ್ಕಳು ಮತ್ತು ಅವರ ಪೋಷಕರಿಗೆ ಅರಿವು ನೀಡುವ ಕಾರ್ಯಕ್ರಮವನ್ನು ಪ್ರಮುಖವಾಗಿ ಕೈಗೆತ್ತಿಕೊಂಡು ನಡೆಸುತ್ತಿರುವುದಾಗಿ ತಿಳಿಸಿದರು. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷರಾದ ರತ್ನಾಕರ ರೈ ಅವರು ಮಾತನಾಡಿ, ಸಂಸ್ಥೆಯ ವತಿಯಿಂದ ಜನಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಮೇಕೇರಿ ಮತ್ತು ಕಗ್ಗೋಡ್ಲು ಅಂಗನವಾಡಿ ಕೇಂದ್ರಗಳಿಗೆ ಅಗತ್ಯವಾದ ಪರಿಕರಗಳನ್ನು ಇದೀಗ ವಿತರಿಸಲಾಗುತ್ತಿದೆ, ವಿವಿಧ ಶಾಲೆಗಳಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಪ್ರೇರಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಶೀಘ್ರದಲ್ಲೆ ಕೃತಕ ಕಾಲು ಜೋಡಣಾ ಶಿಬಿರವನ್ನು ಆಯೋಜಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರೋಟರಿ ಪ್ರಮುಖರಾದ ಬಿ.ಜಿ.ಅನಂತಶಯನ, ರೋಟರಿ ಕಾರ್ಯದರ್ಶಿ ಬಿ.ಕೆ.ಕಾರ್ಯಪ್ಪ, ರೋಟರಿ ಪಬ್ಲಿಕ್ ಇಮೇಜ್ ಕಮಿಟಿ ಉಪಾಧ್ಯಕ್ಷ ಅನಿಲ್ ಎಚ್.ಟಿ. ಉಪಸ್ಥಿತರಿದ್ದರು.








