
ಮಡಿಕೇರಿ ಜ.14 NEWS DESK : ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ಕಾಡಾನೆ ಸೇರಿದಂತೆ ವನ್ಯಜೀವಿಗÀಳ ಉಪಟಳ ಮಿತಿ ಮೀರಿದೆ. ಕೃಷಿ ಫಸಲನ್ನು ಸಂರಕ್ಷಿಸಿಕೊಳ್ಳಲು ಮತ್ತು ಜೀವ ಉಳಿಸಿಕೊಳ್ಳಲು ಬೆಳೆಗಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಈ ಹಿಂದೆ ನಿರ್ಮಿಸುತ್ತಿದ್ದ ‘ಕಂದಕ’ಗಳು ನಂತರ ಬಂದ ‘ಸೌರಬೇಲಿ’ ಯೋಜನೆಗಳೆಲ್ಲವು ಇಂದು ವಿಫಲವಾಗಿದೆ. ಪ್ರಸ್ತುತ ಜಾರಿಗೆ ತಂದಿರುವ ‘ರೈಲ್ವೆ ಹಳಿಗಳ ಬೇಲಿ’ ಒಂದಷ್ಟು ಪ್ರಯೋಜನಕಾರಿಯಾಗಿದ್ದರು, ಇದು ಬೆಟ್ಟಗುಡ್ಡದ ಪ್ರದೇಶಗಳಲ್ಲಿ ಪ್ರಯೋಜನಕ್ಕೆ ಬಾರದಾಗಿದೆ. 2015 ರಿಂದ ಈಚೆಗೆ ಬರಪೊಳೆÉ ಮತ್ತು ಬ್ರಹ್ಮಗಿರಿ ಅರಣ್ಯ ಪ್ರದೇಶದ ಆನೆಗಳು ಬೇಗೂರು, ಚೀನಿವಾಡ, ಕೊಂಗಣ, ಬಿ.ಶೆಟ್ಟಿಗೇರಿ, ಕುಟ್ಟಂದಿ, ವಿ.ಬಾಡಗ, ಈಚೂರು, ಕುಂದ, ಹಳ್ಳ್ಳಿಗಟ್ಟು, ಹುದೂರು ವ್ಯಾಪ್ತಿಯಲ್ಲಿ ಅತಿಯಾಗಿ ಉಪಟಳ ನೀಡುತ್ತಿವೆ. ಕಾಡಾನೆಗಳ ಹಿಂಡು ಭತ್ತದ ಕೃಷಿಯ ಮೇಲೆ ದಾಳಿ ನಡೆಸುತ್ತಾ ಬಂದಿರುವುದಲ್ಲದೆ, ಕಾಫಿ, ಕರಿಮೆಣಸು, ಅಡಿಕೆ, ಬಾಳೆ ಕೃಷಿಯನ್ನೂ ನಾಶ ಮಾಡಿದೆ. ನಾಗರಹೊಳೆ ಅರಣ್ಯ ಪ್ರದೇಶದಲ್ಲೇ ಅತೀ ಹೆಚ್ಚು 146 ಹುಲಿಗಳಿದ್ದು, ಈ ಅರಣ್ಯದಂಚಿನ ಗ್ರಾಮಗಳಲ್ಲಿ ಹುಲಿ ಹಾವಳಿ ಮಿತಿಮೀರಿದೆ. ಒಂದು ದಿನದ ಹಿಂದೆಯಷ್ಟೇ ಬೆಸಗೂರು ಗ್ರಾಮ ವ್ಯಾಪ್ತಿಯಲ್ಲಿ ಎರಡು ಹಸುಗಳು ಹುಲಿ ದಾಳಿಗೆ ಬಲಿಯಾಗಿವೆ. ಕಾಡಾನೆ ಮತ್ತು ಹುಲಿ ದಾಳಿಯ ನಿಯಂತ್ರಣದ ಬಗ್ಗೆ ಅರಣ್ಯ ಇಲಾಖೆ ಹಾಗೂ ಸರಕಾರ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಭರವಸೆಯನ್ನಷ್ಟೇ ನೀಡುತ್ತಿವೆ ಹೊರತು ಶಾಶ್ವತ ಯೋಜನೆ ಇಲ್ಲಿಯವರೆಗೆ ಸಾಕಾರಗೊಂಡಿಲ್ಲ. *ಅರಣ್ಯ ಅಧಿಕಾರಿಗಳೇ ಹೊಣೆಗಾರರು* ವನ್ಯಜೀವಿಗಳ ಉಪಟಳದಿಂದ ಬೇಸತ್ತು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥರು ಹಾಗೂ ರಾಷ್ಟ್ರೀಯ ಕಾಫಿ ಪಾನೀಯ ಹೋರಾಟ ಸಮಿತಿ ಸಂಚಾಲಕ ಮಾಚಿಮಾಡ ರವೀಂದ್ರ ಸರ್ವೋಚ್ಚ ನ್ಯಾಯಾಲಯವು ಬೀದಿನಾಯಿಗಳ ಕಾಟಕ್ಕೆ ಆಡಳಿತ ವ್ಯವಸ್ಥೆಯನ್ನು ಹೊಣೆಗಾರರನ್ನಾಗಿಸಿದೆ. ಅದರಂತೆ ಅರಣ್ಯ ಪ್ರದೇಶದಲ್ಲಿರಬೇಕಾದ ಕಾಡಾನೆ, ಹುಲಿ ಸೇರಿದಂತೆ ವನ್ಯಜೀವಿಗಳು ಗ್ರಾಮೀಣ ಭಾಗಗಳಲ್ಲಿ ನಡೆಸುವ ದಾಂಧಲೆಗೆ ಸಂಬಂಧಿಸಿದಂತೆ ‘ಅರಣ್ಯ ಅಧಿಕಾರಿ’ಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು. ಇದೇ ಜ.19ರ ಒಳಗಾಗಿ ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ಹಾವಳಿ ನಡೆಸುತ್ತಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕು. ಅವುಗಳು ಮರಳಿ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು, ಆಯಕಟ್ಟಿನ ಪ್ರದೇಶಗಳಲ್ಲಿ ಕ್ಯಾಂಪ್ ಹಾಕಿ ಕಾಡಾನೆಗಳು ನಾಡನ್ನು ಪ್ರವೇಶಿಸದಂತೆ ತಡೆಯಬೇಕು. ಇದರೊಂದಿಗೆ ಅರಣ್ಯ ಇಲಾಖೆ ಈ ಹಿಂದೆ ನೀಡಿದ ಭರವಸೆಯಂತೆ ಕಾಡಾನೆಗಳಿಗೆ ಕಾಲರ್ ಐಡಿಗಳನ್ನು ಅಳವಡಿಸಬೇಕು. ಇಲ್ಲವಾದಲ್ಲಿ ಪೊನ್ನಂಪೇಟೆ ಅರಣ್ಯ ಇಲಾಖಾ ಕಚೇರಿಯ ಎದುರು ಗ್ರಾಮಸ್ಥರು ಒಗ್ಗೂಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಬೇಗೂರು ಗ್ರಾಮದ ಕೊಟ್ಟಂಗಡ ರಾಜ ಸುಬ್ಬಯ್ಯ ಅವರು ಮಾತನಾಡಿ ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ, ಕೃಷಿಕರು ಭತ್ತದ ಕೃಷಿಯಿಂದ ದೂರವಾಗುವ ಕಾಲ ಬಹುದೂರವಿಲ್ಲವೆಂದು ಆತಂಕ ವ್ಯಕ್ತಪಡಿಸಿದರು. ಹಾತೂರು ಗ್ರಾ.ಪಂ ವ್ಯಾಪ್ತಿಯ ಕುಂದ ಗ್ರಾಮದ ಮದ್ರೀರ ರಶ್ಮಿ ಮಾತನಾಡಿ, ತಾನು ಹತ್ತು ಏಕರೆ ಭತ್ತದ ಕೃಷಿ ನಡೆಸುತ್ತಿದ್ದೆ. 2023-24ನೇ ಸಾಲಿನಲ್ಲಿ ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದೇನೆ. ಆದರೆ, ಕಾಡಾನೆಗಳ ನಿರಂತರ ದಾಳಿಯಿಂದ ಕಳೆದ ಸಾಲಿನಲ್ಲಿ ಭತ್ತದ ಕೃಷಿ ನಡೆಸಲಾಗದೆ ಭೂಮಿಯನ್ನು ಖಾಲಿ ಬಿಟ್ಟಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಪೊನ್ನಂಪೇಟೆ ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಾಮೇರ ಮೊಣ್ಣಪ್ಪ, ಹುದಿಕೇರಿ ಪಂಚಾಯ್ತಿ ಸದಸ್ಯ ಮಂಡೆಚಂಡ ರಾಜಿ ಪೊನ್ನಪ್ಪ ಹಾಗೂ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಮಾಜಿ ಉಪಾಧ್ಯಕ್ಷ ಮತ್ರಂಡ ಪ್ರವೀಣ್ ಉಪಸ್ಥಿತರಿದ್ದರು.









