
ವಿರಾಜಪೇಟೆ ಜ.15 NEWS DESK : ಬೇಟೋಳಿ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಶ್ರೀ ಅಯ್ಯಪ್ಪ ಮಹೋತ್ಸವ ಹಾಗೂ ಮಕರ ಜ್ಯೋತಿ ಪೂಜಾ ಪೂಜೆ ಶ್ರದ್ಧಾಭಕ್ತಿಯಿಂದ ಜರುಗಿತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಅರ್ಚಕರಾದ ಪ್ರವೀಣ್ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿತು. ಶ್ರೀ ಅಯ್ಯಪ್ಪ ಉತ್ಸವದ ಪ್ರಯುಕ್ತ ದೇವಾಲಯದಲ್ಲಿ ದೇವತಾ ಪ್ರಾರ್ಥನೆ, ಗಣಪತಿ ಹೋಮ ನೆರವೇರಿತು. ಶ್ರೀ ಅಯ್ಯಪ್ಪ ದೇವಸ್ಥಾನದ ಒಳ ಆವರಣದಲ್ಲಿರುವ ಶ್ರೀ ಮಹಾಗಣಪತಿ, ಶ್ರೀ ನಾಗ, ಶ್ರೀ ವನದುರ್ಗೆ ದೇವರುಗಳ ಗುಡಿಯಲ್ಲಿ ಪೂಜೆಯನ್ನು ಸಲ್ಲಿಸಲಾಯಿತು. ನಂತರ ಅರ್ಚಕರು ಶ್ರೀ ಅಯ್ಯಪ್ಪ ಸ್ವಾಮಿಗೆ ಹೂವಿನ ಅಲಂಕಾರ ಪೂಜೆ ಸಲ್ಲಿಸಿದರು. ದೇವಸ್ಥಾನದ ಒಳ ಆವರಣದಲ್ಲಿ ನಿರ್ಮಿಸಲಾಗಿದ್ದ ಹದಿನೆಂಟು ಮೆಟ್ಟಿಲುಗಳುಳ್ಳ ಮಂಟಪದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಅರ್ಚಕರು ಹಾಲಿನ ಅಭಿಷೇಕ, ತುಪ್ಪದ ಅಭಿಷೇಕ, ಸೀಯಾಳದ ಅಭಿಷೇಕ ಹಾಗೂ ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು. ಸಂಜೆ ಶಬರಿಮಲೆಯಲ್ಲಿ ಮಕರ ಜ್ಯೋತಿಯ ದರ್ಶನ ಬಳಿಕ ಪುದುಪಾಡಿ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಮಕರ ಜ್ಯೋತಿ ಪೂಜೆಯು ಶಾಸ್ತ್ರೋಕ್ತವಾಗಿ ಜರುಗಿತು. ಈ ಸಂದರ್ಭ ಶ್ರೀ ಅಯ್ಯಪ್ಪ ಮೂರ್ತಿಯ ಮಂಟಪದ ಎದುರು ಪಡಿ ಪೂಜೆ ನೆರವೇರಿತು. ಅರ್ಚಕರು ಅಯ್ಯಪ್ಪ ಸ್ವಾಮಿಗೆ ಸಂಕಲ್ಪವನ್ನು ಸಲ್ಲಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಮಹಿಳಾ ಭಜನಾ ಮಂಡಳಿಯ ವತಿಯಿಂದ ಭಜನಾವಳಿ, ಸ್ಥಳೀಯ ಶಾಲಾ ಮಕ್ಕಳಿಂದ ಕುಣಿತ ಭಜನೆ ನಡೆಯಿತು. ಶ್ರೀ ಅಯ್ಯಪ್ಪ ಮಹೋತ್ಸವದ ಪ್ರಯುಕ್ತ ಮಧ್ಯಾಹ್ನ ಹಾಗೂ ರಾತ್ರಿ ಭಕ್ತಾದಿಗಳಿಗೆ ಅನ್ನದಾನ ನೆರವೇರಿತು. ಸ್ಥಳೀಯ ಚಿತ್ರಕಲಾ ಕಲಾವಿದರಾದ ಸುನಾದ್ ಭಾರದ್ವಾಜ್ ಶ್ರೀ ಅಯ್ಯಪ್ಪ ಸಭಾಭವನಕ್ಕೆ ಕ್ಯಾನ್ವಾಸ್ ಪೇಂಟಿಂಗ್ ನಲ್ಲಿ ರಚಿಸಿದ ಗಣಪತಿ ಹಾಗೂ ಅಯ್ಯಪ್ಪ ಸ್ವಾಮಿ ದೇವರುಗಳ ಚಿತ್ರ ಕಲಾಕೃತಿಗಳನ್ನು ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು. :: ಮಹಾಗಣಪತಿ ದೇವರಿಗೆ ಬೆಳ್ಳಿಯ ಮುಖ ಕವಚದ ಸಮರ್ಪಣೆ :: ಶ್ರೀ ಅಯ್ಯಪ್ಪ ಮಹೋತ್ಸವದ ಸಂದರ್ಭದಲ್ಲಿ ತಮ್ಮ ಮನದ ಇಷ್ಟಾರ್ಥಗಳು ಈಡೇರಿದ ಫಲವಾಗಿ ದಾನಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಬಿ.ಜಿ.ನಂದ ಬೋರ್ಕರ್, ಗೀತಾ ಬೋರ್ಕರ್ ದಂಪತಿಗಳು ಹಾಗೂ ಬೆಂಗಳೂರಿನ ದಾನಿಗಳಾದ ಪದ್ಮನಾಭ ಮಡ್ಕೇಕರ್, ಜಯ ದಂಪತಿಗಳು ದೇವಸ್ಥಾನದ ಒಳ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವರಿಗೆ ಬೆಳ್ಳಿಯ ಮುಖ ಕವಚ ಹಾಗೂ ಶ್ರೀ ನಾಗದೇವರಿಗೆ ಹಿತ್ತಾಳೆಯ ಮುಖ ಕವಚವನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸಂತೋಷ್, ಉಪಾಧ್ಯಕ್ಷರುಗಳಾದ ನಂದ ಬೋರ್ಕರ್, ಶೈಲೇಶ್ ಕಾಮತ್, ಕಾರ್ಯದರ್ಶಿ ಶಾಂತಿಭೂಷಣ್, ಸದಸ್ಯರುಗಳಾದ ರಾಮಶರ್ಮ, ವಾಸುದೇವ ಬಿ.ಆರ್., ಶ್ರೀಕಾಂತ್ ರಾವ್, ವೀಣಾ, ತೀರ್ಥರಾಮ್, ಸುಮನ ಬಿ.ಪಿ., ದಿನೇಶ್, ಸೀತಮ್ಮ ಹಾಗೂ ಭಕ್ತಾದಿಗಳು ಹಾಜರಿದ್ದರು.









