
ಮಡಿಕೇರಿ ಜ.16 NEWS DESK : ಮತದಾರರ ಪಟ್ಟಿ ಪರಿಷ್ಕರಣೆ (ಎಸ್‍ಐಆರ್) ಸಂವಿಧಾನಬಾಹಿರ ಕ್ರಮವಾಗಿದ್ದು, ಇದರಿಂದ ಕೋಟ್ಯಾಂತರ ಮಂದಿ ಮತದಾನದ ಹಕ್ಕಿನಿಂದ ವಂಚಿತರಾಗುವ ಆತಂಕವಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕೊಡಗು ಜಿಲ್ಲಾ ಸಮಿತಿ ಆರೋಪಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಡಿಪಿಐನ ಜಿಲ್ಲಾಧ್ಯಕ್ಷ ಅಮೀನ್ ಮೊಹ್ಸಿನ್ ಅವರು ಇತ್ತೀಚೆಗೆ ದೇಶದ 11 ರಾಜ್ಯಗಳಲ್ಲಿ ನಡೆಸಿದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ 7 ಕೋಟಿ ಮತದಾರರು ಮತದಾನದ ಹಕ್ಕಿನಿಂದ ಹೊರಗುಳಿದಿದ್ದಾರೆ. ಇನ್ನುಳಿದಿರುವ 19 ರಾಜ್ಯಗಳಲ್ಲಿ ಪರಿಷ್ಕರಣೆ ನಡೆದರೆ ಇನ್ನೆಷ್ಟು ಕೋಟಿ ಮತದಾರರು ಮತದಾನದ ಹಕ್ಕಿನಿಂದ ವಂಚಿರಾಗಬಹುದು ಎನ್ನುವ ಆತಂಕ ಎದುರಾಗಿದೆ ಎಂದರು. ಮತದಾನದ ಹಕ್ಕನ್ನು ಸಾಬೀತು ಪಡಿಸಬೇಕಾದರೆ ಜನನ ಪ್ರಮಾಣ ಪತ್ರ, ಆಸ್ತಿ ಪತ್ರ, ಪಾಸ್ ಪೋರ್ಟ್ ಮೊದಲಾದ ದಾಖಲೆಗಳನ್ನು ಒದಗಿಸಬೇಕೆನ್ನುವ ನಿಯಮ ರೂಪಿಸಲಾಗಿದೆ. ಹಿರಿಯ ನಾಗರಿಕರು ಜನನ ಪ್ರಮಾಣ ಪತ್ರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯಲು ಸಾಧ್ಯವೇ, ದೇಶದಲ್ಲಿರುವ ಎಲ್ಲಾ ಪ್ರಜೆಗಳ ಬಳಿ ಸ್ವಂತ ಆಸ್ತಿ ಇದೆಯೇ, ಪಾಸ್ ಪೋರ್ಟ್ ಹೊಂದಬಹುದಾದಷ್ಟು ಶ್ರೀಮಂತರೇ ಈ ದೇಶದಲ್ಲಿದ್ದಾರೆಯೇ, ಹತ್ತನೇ ತರಗತಿ ದಾಖಲೆ ಬೇಕೆಂದರೆ ಶೇ.100ರಷ್ಟು ಮಂದಿ 10ನೇ ತರಗತಿ ಓದಿದ್ದಾರೆಯೇ ಎಂದು ಪ್ರಶ್ನಿಸಿದರು. ಮತದಾರರ ಪಟ್ಟಿ ಪರಿಷ್ಕರಣೆಯ ಕ್ರಮ ಅವೈಜ್ಞಾನಿಕವಾಗಿದ್ದು, ಇದರ ಹಿಂದೆ ಷಡ್ಯಂತ್ರ ಅಡಗಿದೆ ಮತ್ತು ಸಂವಿಧಾನಕ್ಕೆ ಅಪಾಯ ಕಾದಿದೆ ಎಂದು ಆರೋಪಿಸಿದರು. ರಾಜ್ಯ ಸರಕಾರ ಈ ಕುರಿತು ಯಾವುದೇ ಪ್ರಶ್ನೆ ಮಾಡುತ್ತಿಲ್ಲ, ತನ್ನ ಆಕ್ಷೇಪವನ್ನು ವ್ಯಕ್ತಪಡಿಸುತ್ತಿಲ್ಲ. ತಕ್ಷಣ ಸರಕಾರ ವಿಶೇಷ ಅಧಿವೇಶನ ಕರೆದು ಪರಿಷ್ಕರಣೆಯ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಠರಾವು ಮಾಡಬೇಕು ಎಂದು ಒತ್ತಾಯಿಸಿದರು. ಮತದಾರರ ಪಟ್ಟಿ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಎಸ್‍ಡಿಪಿಐ ವತಿಯಿಂದ ಜ.18 ರಂದು ಮಡಿಕೇರಿಯಲ್ಲಿ ಸಮಾವೇಶ ನಡೆಯಲಿದೆ. ಅಂದು ಬೆಳಿಗ್ಗೆ 10.30 ಗಂಟೆಗೆ ಮಡಿಕೇರಿಯ ಎ.ವಿ ಶಾಲೆ ಬಳಿಯಿಂದ ಗಾಂಧಿ ಮೈದಾನದವರೆಗೆ ಮೆರವಣಿಗೆ ಸಾಗಲಿದೆ. ನಂತರ ನಡೆಯುವ ಸಮಾವೇಶದಲ್ಲಿ ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಉಪಾಧ್ಯಕ್ಷ ದೇವನೂರು ಪುಟ್ಟ ನಂಜಯ್ಯ, ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಪತ್ರಕರ್ತ ರಾ.ಚಿಂತನ್ ಹಾಗೂ ಜಿಲ್ಲೆಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಅಮೀನ್ ಮೊಹ್ಸಿನ್ ತಿಳಿಸಿದರು. ಮತದಾರರ ಪಟ್ಟಿ ಪರಿಷ್ಕರಣೆಯನ್ನು ಕೈಬಿಡಬೇಕು, ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿರುವ ರೈತರ ಜಮೀನನ್ನು ಸಿಎನ್‍ಡಿ ವ್ಯಾಪ್ತಿಗೆ ತಂದು ಸೆಕ್ಷನ್ 4ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಿರುವ ಕ್ರಮವನ್ನು ಕೈಬಿಟ್ಟು ಜಮೀನನ್ನು 57ರ ಅಡಿಯಲ್ಲಿ ಸಕ್ರಮಗೊಳಿಸಬೇಕು. ಮಾನವ ಹಾಗೂ ವನ್ಯಜೀವಿ ನಡುವಿನ ಸಂಘರ್ಷವನ್ನು ತಡೆಯಲು ಶಾಶ್ವತ ಯೋಜನೆಯನ್ನು ರೂಪಿಸಬೇಕು. ಕೊಡಗಿನಲ್ಲಿರುವ ನಿವೇಶನ ರಹಿತ ಮತ್ತು ವಸತಿ ರಹಿತ ಕುಟುಂಬಗಳಿಗೆ ತಕ್ಷಣ ನಿವೇಶನ, ವಸತಿ ಮಂಜೂರು ಮಾಡಬೇಕು. ಎಲ್ಲಾ ನಮೂನೆ 50, 53, 57 ಹಾಗೂ 94ಸಿ, 94ಸಿಸಿ ಫಾಸ್ಟ್ ಟ್ರ್ಯಾಕ್ ಸಮಿತಿ ರಚಿಸಿ ಸಕ್ರಮಗೊಳಿಸಬೇಕು. ಜೀವನದಿ ಕಾವೇರಿ ಕಲುಷಿತಗೊಳ್ಳುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸರಕಾರದ ಮುಂದಿಡುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಸ್‍ಡಿಪಿಐ ಜಿಲ್ಲಾ ಉಪಾಧ್ಯಕ್ಷ ಎಂ.ಕೆ.ಮನ್ಸೂರ್ ಆಲಿ, ಕಾರ್ಯದರ್ಶಿ ಮೇರಿ ವೇಗಸ್, ಸದಸ್ಯ ಅಬ್ದುಲ್ ಅಡ್ಕಾರ್, ನಗರಾಧ್ಯಕ್ಷ ಮೊಹಮ್ಮದ್ ಅಲಿ ಹಾಗೂ ನಗರಸಭಾ ಸದಸ್ಯೆ ನೀಮಾ ಅರ್ಷದ್ ಉಪಸ್ಥಿತರಿದ್ದರು.









