
ನಾಪೋಕ್ಲು ಜ.14 NEWS DESK : ಕೋಪಟ್ಟಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕ್ರೀಡಾಕೂಟ ಹಾಗೂ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು. ಶಾಲಾ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಅರುಣಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ದಾಯನ ರಾಮಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಶಾಲೆ ಪ್ರಾರಂಭವಾದ ಬಗ್ಗೆ ಹಾಗೂ ತಾನು ಒಬ್ಬ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದು, ಇಷ್ಟು ಉನ್ನತ ಹುದ್ದೆಗೆ ಏರಲು ಇದೇ ಶಾಲೆ ಕಾರಣ. ಇದು ನನ್ನ ಎರಡನೇ ದೇವಾಲಯವಿದ್ದಂತೆ ಎಂದು ಸಂತಸ ವ್ಯಕ್ತಪಡಿಸಿದರು. ಇಷ್ಟು ಪುಟ್ಟ ಶಾಲೆಯಲ್ಲಿ ಇಂತಹ ಅದ್ಭುತ ಕಾರ್ಯಕ್ರಮವನ್ನು ನಡೆಸುತ್ತಿರುವುದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮಕ್ಕಳಿಗೆ ಹಿತವಚನವನ್ನು ಹೇಳಿ ತಮ್ಮ ಅನಿಸಿಕೆ ವ್ಯಕ್ತಪಡಿಸುವುದರೊಂದಿಗೆ ಶುಭ ಹಾರೈಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಗೀತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಚೇರಿ ಗ್ರಾ.ಪಂ ಅಧ್ಯಕ್ಷ ಪೊಡನೋಳನ ದಿನೇಶ್, ನಿವೃತ್ತ ಶಿಕ್ಷಕರಾದ ಬಿ.ಎನ್.ಜಯಂತಿ, ಮಡಿಕೇರಿಯ ಕ್ರಿಯೇಟಿವ್ ಇಮೇಜಸ್ ನ ಮಾಲೀಕರಾದ ಕಲೀಲ್, ಶಾಲೆಯ ಎಸ್‍ಡಿಎಂಸಿ ಸದಸ್ಯರು, ಪೋಷಕರು ಭಾಗವಹಿಸಿದ್ದರು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಬಹುಮಾನವನ್ನು ವಿತರಿಸಿದರು. ಶಾಲೆಯ ಮುಖ್ಯ ಶಿಕ್ಷಕರಾದ ರೇಖಾ ಸ್ವಾಗತಿಸಿದರು. ಸಹ ಶಿಕ್ಷಕಿ ಲಿಖಿತಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವು ಸಭಿಕರನ್ನು ರಂಜಿಸಿತು.









