
ಮಡಿಕೇರಿ ಜ.17 NEWS DESK : ಜೀವ ವಿಮಾ ನಿಗಮವು ತನ್ನ ಸ್ಥಾಪನೆಯ 70ನೇ ವರ್ಷಕ್ಕೆ ಕಾಲಿಡುತ್ತಿದ್ದು, ಪಾಲಿಸಿದಾರರ ಸೇವೆಗೆ ಪೂರಕವಾದ ಎಲ್ಲಾ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಸೇವಾ ದಕ್ಷತೆಗೆ ನಿರಂತರವಾಗಿ ಒತ್ತು ನೀಡುತ್ತಿದೆ. ಸಾರ್ವಜನಿಕರು ಎಲ್‍ಐಸಿಯಲ್ಲಿಯೇ ಪಾಲಿಸಿ ತೆಗೆದುಕೊಳ್ಳುವಂತೆ ಎಲ್‍ಐಸಿ ಮೈಸೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ನಾಗೇಶ್ ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1956ರವರೆಗೆ ಖಾಸಗಿ ರಂಗದಲ್ಲಿದ್ದ ಜೀವ ವಿಮಾ ವಹಿವಾಟನ್ನು ರಾಷ್ಟ್ರೀಕರಣಗೊಳಿಸುವ ಸುಗ್ರೀವಾಜ್ಞೆಯನ್ನು ಅಂದಿನ ಕೇಂದ್ರ ಸರ್ಕಾರವು ಜ.19, 1956 ರಂದು ಅಂಗೀಕರಿಸಿದ್ದು, ಜ.19ಕ್ಕೆ ಜೀವ ವಿಮೆಯ ರಾಷ್ಟ್ರೀಕರಣದ 70ನೇ ವರ್ಷಕ್ಕೆ ಕಾಲಿಡುತ್ತಿದೆ. ಭಾರತದ ಜನತೆಯ ನಂಬಿಕೆಯ ಬ್ರಾಂಡ್ ಆಗಿರುವ ಎಲ್‍ಐಸಿಯನ್ನು ಪೋಷಿಸಿ, ಬೆಳೆಸಿದ ಮತ್ತು ಇಂದಿಗೂ ನಂಬಿಕೆ ಇರಿಸಿಕೊಂಡಿರುವ ಪಾಲಿಸಿದಾರರಿಗೆ ಎಸ್.ಎಸ್.ನಾಗೇಶ್ ಕೃತಜ್ಞತೆ ಸಲ್ಲಿಸಿದರು. ಈ 69 ವರ್ಷಗಳಲ್ಲಿ ಎಲ್‍ಐಸಿಯು ರಾಷ್ಟ್ರೀಕರಣದ ಸಂದರ್ಭದಲ್ಲಿ ತನಗೆ ನೀಡಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದೆ. ಭಾರತದ ಜನತೆ ನಂಬಿಕೆಯಿಂದ ನೀಡುವ ಪ್ರೀಮಿಯಂ ಮೊತ್ತವನ್ನು ಜೋಪಾನವಾಗಿರಿಸಿ ಇಂದು ಬೃಹತ್ ನಿಧಿಯಾಗಿ ಬೆಳೆಯುವಂತೆ ನೋಡಿಕೊಂಡಿದೆ. ಜೊತೆಯಲ್ಲಿಯೇ ಭಾರತದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅಗಾಧ ಪ್ರಮಾಣದಲ್ಲಿ ಕೊಡುಗೆಯನ್ನು ನೀಡುತ್ತಲೇ ಬಂದಿದೆ ಎಂದು ತಿಳಿಸಿದರು. ಪ್ರಸಕ್ತ ಆರ್ಥಿಕ ವರ್ಷದಲ್ಲಿಯೂ ತನ್ನ ಸಾಧನೆಯನ್ನು ಮುಂದುವರೆಸಿರುವ ಎಲ್‍ಐಸಿಯು ಇಂದಿಗೂ ಭಾರತದ ಜನತೆಯ ಏಕೈಕ ನಂಬಿಕೆಯ ಬ್ರಾಂಡ್ ಆಗಿ ಹೊರಹೊಮ್ಮಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ದಾವೆ ಇತ್ಯರ್ಥ ಮುಂತಾದ ಪ್ರಮುಖ ಆಯಾಮಗಳಲ್ಲಿ ಎಲ್‍ಐಸಿ ಮೇರು ಸ್ಥಾನ ಗಳಿಸಿದೆ ಎಂದರು. ಸಾರ್ವಜನಿಕ ವಿಮಾ ರಂಗವು ಸ್ಪರ್ಧೆಗೆ ತೆರೆದುಕೊಂಡು 25 ವರ್ಷಗಳು ಕಳೆದರೂ ಸಹ ಎಲ್‍ಐಸಿಯು ತನ್ನ ಅಧಿಪತ್ಯವನ್ನು ಕಾಯ್ದಿರಿಸಿಕೊಂಡಿದೆ. ಎಲ್‍ಐಸಿಯಲ್ಲಿ ಹೂಡುವ ಜನರ ಉಳಿತಾಯವು ಸುರಕ್ಷಿತವಾಗಿರುತ್ತದೆ ಎಂದು ಭರವಸೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಂಟಿ ಕಾರ್ಯದರ್ಶಿ ಕಾಳಪ್ಪ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಅನಂತೇಶ್ ಸರಳಯ್ಯ, ಪ್ರಮುಖರಾದ ಗಣೇಶ್ ಉಪಸ್ಥಿತರಿದ್ದರು.









