

ಸುಂಟಿಕೊಪ್ಪ NEWS DESK ಜ.17 : ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಾಪುರ ಹೊಳೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ದುರದೃಷ್ಟವಶಾತ್ ನೀರಿನಲ್ಲಿ ಮುಳುಗಿ ಮೃತಪಟ್ಟ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿದರು. ಸ್ಥಳದಲ್ಲಿ ಹಾಜರಿದ್ದ ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿ, ಮುಂದಿನ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸುಂಟಿಕೊಪ್ಪದ ಪಂಪ್‌ಹೌಸ್ ನಿವಾಸಿಗಳಾದ ಸುಂಟಿಕೊಪ್ಪ ಆಟೋಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಶರೀಫ್ ಅವರ ಪುತ್ರ ಮಹಮ್ಮದ್ ರಾಯಿಜ್ (16) ಹಾಗೂ ಸರದಾರ್ ಅವರ ಪುತ್ರ ಮಹಮ್ಮದ್ ನಿಹಾಲ್ (16) ಮೃತ ದುರ್ದೈವಿಗಳಾಗಿದ್ದಾರೆ.








