
ನಾಪೋಕ್ಲು ಜ.19 NEWS DESK : ಬಲ್ಲಮಾವಟಿ ಗ್ರಾಮ ಪಂಚಾಯಿತಿಯ 2025-26 ಸಾಲಿನ ಗ್ರಾಮ ಸಭೆ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು. ವಿದ್ಯುತ್ ಇಲಾಖೆಯ ಸಿಬ್ಬಂದಿಗಳು ಬಿಲ್ ಹಣ ಸಂಗ್ರಹಿಸಲು ತೋರುವ ಆಸಕ್ತಿಯನ್ನು ವಿದ್ಯುತ್ ಸರಬರಾಜು ಮಾಡಲು ತೋರುತ್ತಿಲ್ಲ. ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ತಲೆದೋ ರಿದೆ. ಮನಬಂದಂತೆ ವಿದ್ಯುತ್ ಕಡಿತ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿಯ ಗ್ರಾಮ ಸಭೆಗೆ ಇಲಾಖೆ ಅಧಿಕಾರಿ ಸಹಾಯಕ ಇಂಜಿನಿಯರ್ ಆಗಮಿಸಿಲ್ಲ. ಇಲಾಖಾ ಸಮಸ್ಯೆಗಳನ್ನು ತೋಡಿಕೊಳ್ಳಲು ಅಧಿಕಾರಿಗಳು ಆಗಮಿಸುತ್ತಿಲ್ಲ ಈ ಬಗ್ಗೆ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಬಲ್ಲಮಾವಟಿ, ಪುಲಿಕೋಟು, ಪೇರೂರು ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಅನುಷ್ಠಾನದಲ್ಲಿ ಅವ್ಯವಹಾರ ಕಂಡು ಬಂದಿದೆ. ಈ ಬಗ್ಗೆ ತನಿಖೆ ಆಗಬೇಕು. ಗ್ರಾಮೀಣ ಕೆಲವು ಭಾಗಗಳಿಗೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಗ್ರಾಮೀಣ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಅಲ್ಲಲ್ಲಿ ಹೈ ಮಾಸ್ಕ್ ಲ್ಯಾಂಪ್ ಅಳವಡಿಸಬೇಕು ಎಂದು ಮನವಿ ಮಾಡಿದರು. ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಮಾಡಿಸಲು ಸೋಮವಾರ ಆರೋಗ್ಯ ಇಲಾಖೆಯ ಸೇವಾ ಕೇಂದ್ರಕ್ಕೆ ಗ್ರಾಮೀಣ ಜನರು ಆಗಮಿಸುತ್ತಾರೆ. ಅದೇ ದಿನ ತಾಲೂಕು ಹಂತದ ಸಭೆ ಏರ್ಪಡಿಸಿದರೆ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತದೆ. ಸೋಮವಾರ ಹೊರತುಪಡಿಸಿ ಬೇರೆ ದಿನಗಳಲ್ಲಿ ಸಭೆ ಏರ್ಪಡಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು. ಆರೋಗ್ಯ, ಕೃಷಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಿತು. ನೋಡಲ್ ಅಧಿಕಾರಿಯಾಗಿ ಮಡಿಕೇರಿ ತಾಲೂಕು ಅಕ್ಷರ ದಾಸೋಹ ಸಹಾಯಕನಿರ್ದೇಶಕ ಹೇಮಂತ್ ಕುಮಾರ್, ಪಂಚಾಯಿತಿ ಸದಸ್ಯರಾದ ಮಣವಟ್ಟಿರ ಹರೀಶ್ ಕುಶಾಲಪ್ಪ, ಮುಕ್ಕಾಟಿರ ಸುತನ್ ಸುಬ್ಬಯ್ಯ, ಬಾಳೆಯಡ ದೀನಾ ಮಾಯಮ್ಮ,ಮಚ್ಚುರ ರವೀಂದ್ರ, ರಾಜೀವಿ, ಇತರ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ದಯಾ ಚಿಣ್ಣಪ್ಪ ಪ್ರಾರ್ಥಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪೂಣಚ್ಚ(ಶರತ್) ಸ್ವಾಗತಿಸಿ ವಂದಿಸಿದರು.
ವರದಿ : ದುಗ್ಗಳ ಸದಾನಂದ.









