
ಮಡಿಕೇರಿ ಜ.19 NEWS DESK : ಪೊನ್ನಂಪೇಟೆಯಲ್ಲಿ ನಾರಾಯಣಗುರುಗಳ ಹೆಸರಿನಲ್ಲಿ ಭವನ ನಿರ್ಮಿಸಲು ಜಾಗ ನಿಗದಿ ಮಾಡಿದ್ದು, ರೂ.1 ಕೋಟಿ ಹಣ ಮೀಸಲಿರಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಎಲ್ಲರೂ ಎಲ್ಲಾ ಸಮಾಜಗಳ ಬೆಳವಣಿಗೆಗೆ ಅವಕಾಶ ಮಾಡಿಕೊಡಬೇಕು. ವಿವಿಧತೆಯಲ್ಲಿ ಏಕತೆ ಇರಬೇಕು. ಸಮಾಜದಲ್ಲಿ ಒಡಕು ತರುವುದನ್ನು ನಾವು ಒಪ್ಪಲು ಸಾಧ್ಯವೇ ಇಲ್ಲ. ಎಲ್ಲ ಸಮಾಜದ ಬೆಳವಣಿಗೆಗೆ ನಾವು ಅವಕಾಶ ಮಾಡಿಕೊಡಬೇಕು ಎಂದರು. ನಾನು ಶಾಸಕನಾಗಿ ಆಯ್ಕೆಯಾದ ನಂತರ ಬಿಲ್ಲವ ಸಮಾಜ ಸೇವಾ ಸಂಘದ ಮುಖಂಡರು ಭೇಟಿ ಮಾಡಿ ಜಾಗಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಆದರೆ, ಇದುವರೆಗೂ ಸ್ಪಂದನ ಸಿಕ್ಕಿಲ್ಲ ಎಂದು ಮನವಿ ನೀಡಿದ್ದರು. ಆನಂತರ ಈ ಕುರಿತು ಸರಕಾರದ ಗಮನ ಸೆಳೆದೆ. ಆದರೆ ಜಾಗ ಪಡೆಯುವುದು ಸುಲಭವಾಗಿರಲಿಲ್ಲ. ಅಧಿಕಾರಿಗಳು 2 ಬಾರಿ ಕಡತವನ್ನು ವಾಪಸ್ ಕಳಿಸಿದ್ದರು. ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಖಾತೆ ಸಚಿವ ಕೃಷ್ಣಬೈರೇಗೌಡ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೆ. ಅದರ ಫಲವಾಗಿ ನಗರದ ಹೃದಯ ಭಾಗದಲ್ಲಿ ಉತ್ತಮ ಜಾಗ ಸಮಾಜಕ್ಕೆ ಲಭಿಸಿತು ಎಂದು ಹೇಳಿದರು ಜಾಗವನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಅಲ್ಲಿ ಭವನ ನಿರ್ಮಿಸಲು ಎಲ್ಲರೂ ಕೈಜೋಡಿಸಿ ಎಂದು ಕರೆ ನೀಡಿದರು. ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನ ಮಠದ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ನಮ್ಮಿಂದ ಸಮಾಜಕ್ಕೆ ಏನಾದರೂ ಒಳಿತಾಗಬೇಕು ಎಂಬ ಮನೋಭಾವ ಇರಬೇಕು. ಎಲ್ಲರೂ ತಿಂಗಳ ಸಂಪಾದನೆಯಲ್ಲಿ ಒಂದಿಷ್ಟು ಹಣವನ್ನು ಸಂಘದ ಖಾತೆಗೆ ಹಾಕಬೇಕು. ಈ ಬಗೆಯ ಅರ್ಪಣಾ ಮನೋಭಾವದಿಂದ ಕಟ್ಟಡ ಕಟ್ಟುವ ಕಾರ್ಯ ಆರಂಭವಾಗಲಿ ಎಂದು ಹೇಳಿದರು. ಮೆಸ್ಕಾಂ ಅಧ್ಯಕ್ಷ ಹರೀಶಕುಮಾರ್, ಮುಖಂಡರಾದ ರಮಾನಾಥ ಬೇಕಲ್, ಕೊಡಗು ಜಿಲ್ಲಾ ಬಿಲ್ಲವ ಸಮಾಜಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಆರ್.ಲಿಂಗಪ್ಪ ಪೂಜಾರಿ, ಮಂಗಳೂರಿನ ಕಂಕನಾಡಿ ಗರಡಿಯ ಅಧ್ಯಕ್ಷ ಚಿತ್ತರಂಜನ್, ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ್ ಸುವರ್ಣ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ 40 ಸಾವಿರ ಮೌಲ್ಯದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಎಂ.ಟೆಕ್‍ನಲ್ಲಿ ಚಿನ್ನದ ಪದಕ ವಿಜೇತೆ ಚೇರಂಬಾಣೆಯ ಬಿ.ಬಿ.ಸೋನಾ, ಎಂ.ಫಾರ್ಮದ ಚಿನ್ನದ ಪದಕ ತ ವಿಜೇತೆ ಬಿ.ವಿ.ಮಂಜುಶ್ರೀ, ಸಂಗೀತ ಪ್ರಶಸ್ತಿ ವಿಜೇತೆ ಚಿತ್ರಾ ಆರ್ಯನ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಬಳಿಕ, ಭರತನಾಟ್ಯ, ಗಾಯನ, ಸಮೂಹ ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.









