
ಮಡಿಕೇರಿ NEWS DESK ಜ.20 : ಕೇಂದ್ರ ಸರಕಾರ ರಾಜ್ಯ ಸರಕಾರಗಳ ಅಭಿಪ್ರಾಯವನ್ನು ಪಡೆಯದೆ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ‘ವಿಬಿ ರಾಮ್ ಜಿ’ ಯೋಜನೆಯನ್ನಾಗಿ ಪರಿವರ್ತಿಸಿ, ಸರ್ವಾಧಿಕಾರಿಯಂತೆ ವರ್ತಿಸುವ ಮೂಲಕ, ಗ್ರಾಮ ಪಂಚಾಯ್ತಿಗಳ ಅಧಿಕಾರವನ್ನು ಕಸಿದುಕೊಂಡಿರುವುದಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಆರೋಪಿಸಿದ್ದಾರೆ. ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರ್ಗದ ಮಂದಿಯ ಕೈಗೆ ಕೆಲಸವನ್ನು ಒದಗಿಸುತ್ತಿದ್ದ ನರೇಗಾ ಯೋಜನೆ ರಾಷ್ಟçವ್ಯಾಪಿ ಕೋಟ್ಯಂತರ ಬಡ ಮಂದಿಯ ಬದುಕಿಗೆ ಆಧಾರವಾಗಿತ್ತು. ಇಂತಹ ಯೋಜನೆಯನ್ನು ಯಾವುದೇ ಸಂಘ-ಸಂಸ್ಥೆ, ಜನಪ್ರತಿನಿಧಿಗಳು, ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸದೆ ಕೇವಲ 72 ಗಂಟೆಗಳಲ್ಲಿ ತರಾತುರಿಯಿಂದ ಬದಲಿಸಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಿಬಿ ರಾಮ್ ಜಿ ಯೋಜನೆಯನ್ನು ಹಿಂಪಡೆಯುವವರೆಗೂ ರಾಷ್ಟ್ರವ್ಯಾಪಿ ಕಾಂಗ್ರೆಸ್ ಜನಜಾಗೃತಿಯನ್ನು ಮೂಡಿಸುವುದರೊಂದಿಗೆ ಹೋರಾಟಗಳನ್ನು ನಡೆಸಲಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಲು ರಾಜ್ಯ ಸರಕಾರ ಏಳು ದಿನಗಳ ವಿಶೇಷ ಅಧಿವೇಶನವನನ್ನು ಕರೆದಿರುವುದಾಗಿ ಹೇಳಿದರು. ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರದ ಶೇ.90ರ ಆರ್ಥಿಕ ನೆರವು ಇದ್ದಿತಾದರೆ, ರಾಜ್ಯ ಸರ್ಕಾರ ಶೇ.10 ಪಾಲುಹಣವನ್ನು ನೀಡುತ್ತಿತ್ತು. ಇದೀಗ ವಿಬಿ ರಾಮ್‌ಜಿ ಯೋಜನೆಯಡಿ ಕೇಂದ್ರದ ಪಾಲು ಶೇ.60 ಆಗಿದ್ದರೆ, ರಾಜ್ಯ ಸರ್ಕಾರಗಳು ಶೇ.40 ಪಾಲು ಹಣವನ್ನು ತುಂಬಬೇಕಾಗುತ್ತದೆ. ಇದು ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಹೊರೆಯಾಗುವುದಲ್ಲದೆ, ಈ ಯೋಜನೆಯಡಿ ಹಿಂದಿನ ನರೇಗಾ ಯೋಜನೆಯಲ್ಲಿ ಕಾಮಗಾರಿಗಳನ್ನು ನಡೆಸಲು ಗ್ರಾಮ ಪಂಚಾಯ್ತಿಗಳಿಗಿದ್ದ ಅಧಿಕಾರವನ್ನು ಹಿಂದಕ್ಕೆ ಪಡೆಯಲಾಗಿದೆ. ನೂತನ ವಿಬಿ ರಾಮ್ ಜಿ ಯೋಜನೆಯಲ್ಲಿ ಕೇಂದ್ರವೆ ಗ್ರಾಮ ಪಂಚಾಯ್ತಿಗಳನ್ನು ಆಯ್ಕೆ ಮಾಡಲಿದೆಯಲ್ಲದೆ, ಕಾಮಗಾರಿಗಳನ್ನು ನಿರ್ಧರಿಸಲಿದೆ. ಆ ಮೂಲಕ ಗ್ರಾಮ ಪಂಚಾಯ್ತಿಗಳ ಕ್ರಿಯಾಯೋಜನೆ ಮಾಡುವ ಹಕ್ಕನ್ನು ಕಸಿದುಕೊಂಡಿದೆಯೆಂದು ಗಂಭೀರ ಆರೋಪ ಮಾಡಿದರು. ಹಿಂದಿನ ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಕನಿಷ್ಟ 100 ದಿನಗಳ ಕೆಲಸವನ್ನು ನಿಗದಿಪಡಿಸಲಾಗಿತ್ತು. ಅದಕ್ಕಿಂತ ಹೆಚ್ಚಿನ ಕೆಲಸದ ದಿನಗಳನ್ನು ಪಡೆದುಕೊಳ್ಳಲು ಅವಕಾಶವನ್ನು ಒದಗಿಸಲಾಗಿತ್ತು. ಆದರೆ, ವಿಬಿ ರಾಮ್ ಜಿ ಯೋಜನೆಯಡಿ ಕಾಮಗಾರಿಗಳ ಸಂಖ್ಯೆಯನ್ನು 125 ದಿನಗಳಿಗಷ್ಟೆೆ ಸೀಮಿತಗೊಳಿಸಲಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಯೋಜನೆಯನ್ನು ಬದಲಿಸುವ ಹಂತದಲ್ಲಿ ‘ಭ್ರಷ್ಟಾಚಾರ’ಕ್ಕೆ ಕಡಿವಾಣವೆನ್ನುವ ಕಾರಣವನ್ನು ಬಿಜೆಪಿ ನೀಡುತ್ತದೆ. ಆದರೆ, ಯಾವ ಇಲಾಖೆಯಲ್ಲಿ ಭ್ರಷ್ಟಾಚಾರವಿಲ್ಲ, ಇರುವ ಲೋಪ ದೋಷಗಳನ್ನು ಸರಿಪಡಿಸಬೇಕೇ ಹೊರತು ಯೋಜನೆಯನ್ನೆ ಬದಲಿಸುವುದು ಮಾರ್ಗವಲ್ಲವೆಂದು ಹೇಳಿದರು. ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಕೊಡಗು ಜಿಲ್ಲೆಯಲ್ಲಿ 2025-26ಕ್ಕೆ ಸಂಬAಧಿಸಿದAತೆ ಶೇ. 68.49 ರಷ್ಟು ಸಾಧನೆ ಮಾಡಲಾಗಿದೆಯೆಂಸು ಸಚಿವ ಭೋಸರಾಜು ಅವರು ತಿಳಿಸಿದರು. ಜಿಲ್ಲೆಯ ನರೇಗಾ ಯಶಸ್ಸಿನಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದ್ದು, ಒಟ್ಟು ಮಾನವ ದಿನಗಳನ್ನು ಶೇ.49.22 ಪಾಲು ಮಹಿಳೆಯರದ್ದಾಗಿದೆ. ಯೋಜನೆಯಡಿ ಒಳಕೆಯಾದ ಒಟ್ಟು ಮೊತ್ತದಲ್ಲಿ ಶೇ.62.04 ರಷ್ಟನ್ನು ಕೃಷಿ ಮತ್ತು ಕೃಷಿಗೆ ಪೂರಕವಾದ ಚಟುವಟಿಕೆಗಳಿಗೆ ಬಳಸಲಾಗಿದೆಯೆಂದು ಸಚಿವರು ಮಾಹಿತಿ ನೀಡಿದರು. *ಪ್ರಜಾಪ್ರಭುತ್ವ ವಿರೋಧಿಗಳು* ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ, ಒಕ್ಕೂಟ ವ್ಯವಸ್ಥೆಯಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಭಾಗಿತ್ವಕ್ಕೆ ವಿರುದ್ಧವಾಗಿ ವಿಬಿ ರಾಮ್ ಜಿ ಯೋಜನೆಯಡಿ ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಶೇ.40ರ ಆರ್ಥಿಕ ಹೊರೆಯನ್ನು ಹೊರಿಸಿದೆ. ಇದು ನಿಯಮಗಳಿಗೆ ವಿರುದ್ಧವಾದುದೆಂದು ಸ್ಪಷ್ಟಪಡಿಸಿ, ಬಿಜೆಪಿ ಎಂದಿಗೂ ರಾಷ್ಟ್ರದ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಲ್ಲ ಮತ್ತು ಅವರು ಪ್ರಜಾಪ್ರಭುತ್ವ ವಿರೋಧಿಗಳಾಗಿದ್ದಾರೆ ಎಂದು ಟೀಕಿಸಿದರು. ಕೇಂದ್ರದ ವಿಬಿ ರಾಮ್ ಜಿ ಯೋಜನೆಯನ್ನು ಎನ್‌ಡಿಎ ಪಾಲುದಾರ ಪಕ್ಷವಾದ ಆಂಧ್ರದ ತೆಲುಗು ದೇಶಂನ ಚಂದ್ರಬಾಬು ನಾಯ್ಡು ಅವರೇ ತಮ್ಮ ಸಮ್ಮತಿಯನ್ನು ವ್ಯಕ್ತಪಡಿಸಿಲ್ಲ. ನೆರೆಯ ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ವಿರೋಧವನ್ನು ವ್ಯಕ್ತಪಡಿಸಿವೆಯೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಪಕ್ಷದ ಪ್ರಮುಖರಾದ ಕೆ.ಬಿ.ಶಾಂತಪ್ಪ ಹಾಗೂ ತೆನ್ನಿರ ಮೈನಾ ಉಪಸ್ಥಿತರಿದ್ದರು.








