
ಮಡಿಕೇರಿ ಜ.21 NEWS DESK : ಪರಿಸರ ಮಾಲಿನ್ಯವಾಗುವುದನ್ನು ತಡೆಯಲು ಮತ್ತು ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಡಾಂಬರು ಘಟಕ ಮತ್ತು ಕಾಂಕ್ರೀಟ್ ಮಿಶ್ರಣ ಘಟಕಗಳಿಗೆ ಅವಕಾಶ ನೀಡದಂತೆ ಪರಿಸರ ಮತ್ತು ಆರೋಗ್ಯ ಫೌಂಡೇಶನ್ ಅಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಾಂಬರು ಘಟಕ ಮತ್ತು ಕಾಂಕ್ರೀಟ್ ಮಿಶ್ರಣ ಘಟಕಗಳು ಗರ್ಭಿಣಿ ಮಹಿಳೆಯರ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ ಗ್ರಾ.ಪಂ ಗಳು ಹಾಗೂ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು. ಈ ಘಟಕಗಳ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ವೈಜ್ಞಾನಿಕ ಸಂಶೋಧನೆಯ ಪ್ರಕಾರ ಭಾರೀ ಮಾಲಿನ್ಯದ ಗಾಳಿಯನ್ನು ಉಸಿರಾಡಿದಾಗ ಕಪ್ಪು ಕಾರ್ಬನ್ ನ ಅತ್ಯಂತ ಸಣ್ಣ ಕಣಗಳು ಭ್ರೂಣಕ್ಕೆ ತಲುಪುತ್ತವೆ. ಶಿಶು ಕಡಿಮೆ ಬುದ್ಧಿಮತ್ತೆ ಮತ್ತು ಅನಾರೋಗ್ಯದಿಂದ ಜನಿಸುತ್ತದೆ. ಸ್ತನ್ಯಪಾನ ಮಾಡುವ ತಾಯಿಯರ ವಿಷಯದಲ್ಲೂ ಇದೇ ಪರಿಸ್ಥಿತಿ ಸಂಭವಿಸುತ್ತದೆ. ಏಕೆಂದರೆ ತಾಯಿಯ ಹಾಲಿನ ಮೂಲಕ ಮಾಲಿನ್ಯ ಶಿಶುವಿಗೆ ತಲುಪುತ್ತದೆ. ಈ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು. ದಕ್ಷಿಣ ಕೊಡಗಿನ ಈಚೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾಂಬರು ಘಟಕವನ್ನು ಗ್ರಾಮಸ್ಥರ ಒತ್ತಾಯದ ಹಿನ್ನೆಲೆ ಮೇ 31 ರೊಳಗೆ ಮುಚ್ಚುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಈ ಘಟಕದಿಂದ ಗ್ರಾಮಸ್ಥರು ಅನುಭವಿಸುತ್ತಿರುವ ಸಮಸ್ಯೆಗಳನ್ನು ತಾವು ಶಾಸಕ ಎ.ಎಸ್.ಪೊನ್ನಣ್ಣ ಅವರ ಗಮನಕ್ಕೆ ತಂದ ತಕ್ಷಣ ಸ್ಪಂದಿಸಿ ಕ್ರಮ ಕೈಗೊಂಡಿದ್ದಾರೆ. ಇದಕ್ಕಾಗಿ ಶಾಸಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಕರ್ನಲ್ ಸಿ.ಪಿ.ಮುತ್ತಣ್ಣ ಅವರು ಮುಂದಿನ ದಿನಗಳಲ್ಲಿ ಜಿಲ್ಲೆಯ ಇಬ್ಬರು ಶಾಸಕರು ಡಾಂಬರು ಘಟಕ ಮತ್ತು ಕಾಂಕ್ರೀಟ್ ಮಿಶ್ರಣ ಘಟಕಗಳಿಗೆ ಅವಕಾಶ ನೀಡುವುದಿಲ್ಲ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಪರಿಸರ ಮತ್ತು ಆರೋಗ್ಯ ಫೌಂಡೇಶನ್ ನ ಸದಸ್ಯರಾದ ಶ್ಯಾಂ ಬೋಪಯ್ಯ ಹಾಗೂ ರಾಯ್ ಬೋಪಣ್ಣ ಉಪಸ್ಥಿತರಿದ್ದರು.









