
ಮಡಿಕೇರಿ ಜ.21 NEWS DESK : ದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವಲ್ಲಿ ತಮ್ಮ ಜೀವನವನ್ನು ಸಮರ್ಪಿಸಿರುವ ಭಾರತೀಯ ಸೇನೆಯ ಶೌರ್ಯ, ತ್ಯಾಗ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಕೊಡಗು ಸೈನಿಕ ಶಾಲೆಯಲ್ಲಿ ಸೇನಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಟಾರಿ ನಿಲಯದ ವಿದ್ಯಾರ್ಥಿಗಳು ಪ್ರೇರಣಾದಾಯಕ ಐಎಂಎ ಗೀತೆಯ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್, ಭಾರತೀಯ ಸೇನೆಗೆ ಬದ್ಧತೆ, ಚಾರಿತ್ರ್ಯ, ಅಖಂಡತೆ, ನಿಷ್ಠೆ, ನೈತಿಕ ಧೈರ್ಯ ಮತ್ತು ಶಿಸ್ತು ಮುಖ್ಯವಾಗಿದ್ದು, ಈ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್, ಉಪಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮಹಮದ್ ಷಾಜಿ, ಹಿರಿಯ ಶಿಕ್ಷಕರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಭಾರತೀಯ ಸೇನೆ ಹಾಗೂ ಅದರ ವೈಭವಶಾಲಿ ಪರಂಪರೆಯ ಗೌರವಕ್ಕೆ ಅರ್ಥಪೂರ್ಣ ನಮನ ಸಲ್ಲಿಸಲಾಯಿತು. ದಿನದ ಸುಭಾಷಿತ, ಕವನವಾಚನ ಹಾಗೂ ಭಾರತೀಯ ಸೇನೆ ಮತ್ತು ಅದರ ಕಾರ್ಯಾಚರಣೆಗಳ ವಿವಿಧ ಅಂಶಗಳನ್ನು ವಿವರಿಸುವ ಕುರಿತು ಹಲವು ದೃಷ್ಯಾವಳಿಗಳ ಮೂಲಕ ಪ್ರಾತ್ಯಕ್ಷಿಕೆ ನೀಡಿದರು. ಕೆಡೆಟ್ ದಾನಿಷ್ ಅಹ್ಮದ್ ಹಾಗೂ ಕೆಡೆಟ್ ನಿಶಾಂತ್ ನಾರಾಯಣ್ ಅವರು ಯುದ್ಧ ಸಂದರ್ಭದಲ್ಲಿ ಹಾಗೂ ಶಾಂತಿಯ ಸಂದರ್ಭದಲ್ಲೆರಡರಲ್ಲೂ ಭಾರತೀಯ ಸೇನೆಯ ಪಾತ್ರದ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು. ಶಾಲೆಯ 11ನೇ ತರಗತಿಯ ಕೆಡೆಟ್ ಸಾಮ್ರಾಟ್ ಅವರು ರಚಿಸಿ, ನಿರ್ದೇಶಿಸಿದ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ನಾಟಕದಲ್ಲಿ ಪರಮ ವೀರ ಚಕ್ರ ಪುರಸ್ಕೃತ ಗ್ರೆನೇಡಿಯರ್ ಸುಬೇದಾರ್ ಮೇಜರ್ ಗೌರವ ಕ್ಯಾಪ್ಟನ್ ಯೋಗೇಂದ್ರಸಿಂಗ್ ಯಾದವ್ ಅವರ ಜೀವನದ ವಿವಿಧ ಪ್ರಮುಖ ಘಟನಾವಳಿಯನ್ನು ಪ್ರದರ್ಶಿಸಿ, ಅವರ ಧೈರ್ಯ, ಸ್ಥೈರ್ಯ ಮತ್ತು ಸಮರ್ಪಣಾ ಮನೋಭಾವವು ಪ್ರೇಕ್ಷಕರನ್ನು ಪ್ರೇರೇಪಿಸಿತು.









