
ಮಡಿಕೇರಿ ಜ.22 NEWS DESK : ಪತ್ರಕರ್ತ ಪ್ರಶಾಂತ್. ಟಿ.ಆರ್ ವಿರಚಿತ ಸೌಪರ್ಣಿಕಾ ಕಾದಂಬರಿಗೆ ಅಕ್ಷರನಾದ ಪ್ರತಿಷ್ಠಾನ ನೀಡುವ ಪ್ರತಿಷ್ಠಿತ ಏಷ್ಯಾ ಗ್ಲೋಬಲ್ ಅವಾರ್ಡ್ ಸಂದಿದೆ. ಸೌಪರ್ಣಿಕಾ, ಸಾಹಿತ್ಯವನ್ನೇ ಉಸಿರಾಗಿಸಿಕೊಂಡ ಮಹಿಳೆಯ ಯಶೋಗಾಥೆಯನ್ನು ಒಳಗೊಂಡಿದೆ. ಈ ಕಾದಂಬರಿಯನ್ನು ಮೆಚ್ಚಿದ ಕನ್ನಡ ಚಿತ್ರರಂಗದ ಖ್ಯಾತ ನಟಿ, ಡಾ. ಮೇಘನಾ ಗಾಂವ್ಕರ್ ಹಿನ್ನುಡಿ ಬರೆದಿದ್ದು, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ಪುಟ್ಟಣ ಕಣಗಾಲ್ ಪ್ರಶಸ್ತಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಕೆ. ಶಿವರುದ್ರಯ್ಯ ಮುನ್ನಡಿ ಬರೆದಿದ್ದಾರೆ. ವಿಶೇಷ ಎಂದರೆ ಸೌಪರ್ಣಿಕಾ ಕಾದಂಬರಿ “ಅವಳ ಕಣ್ಣಲಿ” ಶೀರ್ಷಿಕೆಯಲ್ಲಿ ಕಿರುಚಿತ್ರವಾಗಿಯೂ ಮೂಡಿಬರುತ್ತಿದೆ. ಈಗಾಗಲೇ ಚಿತ್ರೀಕರಣವೂ ಆರಂಭವಾಗಿದ್ದು, ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ಪ್ರಶಾಂತ್ ಈಗಾಗಲೇ “ಹೊನ್ನಮ್ಮನ ಕನಸು” ಹಾಗೂ “ಬಾಳ ಹಾದಿಯಲಿ ಬೆಳ್ಳಿಚುಕ್ಕಿ” ಕಾದಂಬರಿಗಳನ್ನು ರಚಿಸಿದ್ದಾರೆ. “ಹೊನ್ನಮ್ಮನ ಕನಸು” ಕಾದಂಬರಿಗೆ ರಾಜ್ಯಮಟ್ಟದ ಪ್ರಶಸ್ತಿ ಸಂದಿದ್ದು, “ಬಾಳ ಹಾದಿಯಲಿ ಬೆಳ್ಳಿಚುಕ್ಕಿ”ಗೆ ಇಂಡಿಯನ್ ಐಕಾನ್ ಅವಾರ್ಡ್ ಹಾಗೂ ಪ್ರತಿಷ್ಠಿತ ಕೋವೆಂಟ್ರಿ ಅವಾರ್ಡ್ ಕೂಡ ಲಭಿಸಿದೆ.ಅಕ್ಷರನಾದ ಪ್ರತಿಷ್ಠಾನ ಸಾಹಿತ್ಯದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಪ್ರತಿವರ್ಷ ಪ್ರಶಸ್ತಿ ನೀಡುತ್ತಾ ಬಂದಿದೆ. ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ರಾಜಸ್ಥಾನ, ಆಂಧ್ರಪ್ರದೇಶ, ಮಹಾರಾಷ್ಟ್ರ ಹೀಗೆ ಹಲವು ಕಡೆಗಳಿಂದ ಸಾಹಿತ್ಯದಲ್ಲಿ ಸಾಧನೆ ಮಾಡಿದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಶಾಂತ್, ವಿಶ್ವವಾಣಿ ಪತ್ರಿಕೆಯ ಸಿನಿಮಾ ಪುರವಣಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ ಹಲವು ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಅಕ್ಷರನಾದ ಪ್ರತಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.









