


ಸುಂಟಿಕೊಪ್ಪ ಜ.22 NEWS DESK : ಕೇಂದ್ರ ಸರಕಾರವು ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿ ವಿಬಿ ರಾಮ್ ಜಿ ಹೆಸರಿನಲ್ಲಿ ಜಾರಿಗೆ ತರುತ್ತಿರುವುದನ್ನು ವಿರೋಧಿಸಿ ಸುಂಟಿಕೊಪ್ಪ ಗ್ರಾಮ ಪಂಚಾಯ್ತಿಯ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ಸಾಮಾನ್ಯ ಸಭೆಯಲ್ಲಿ ನಡೆಯಿತು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಂದ್ರ ಸರಕಾರದಿಂದ ಬಂದಿರುವ ಸುತ್ತೋಲೆಯ ಕುರಿತು ಪ್ರಸ್ತಾಪಿಸಿದಾಗ ಪಂಚಾಯಿತಿ ಸದಸ್ಯರಾದ ಹೆಚ್.ಯು.ರಫೀಕ್ ಖಾನ್ ಅವರು ಈ ಕುರಿತು ವಿರೋಧ ವ್ಯಕ್ತಪಡಿಸಿದರಲ್ಲದೆ.ಸಭಾ ನಡುವಳಿಯಲ್ಲಿ ಲಿಖಿತವಾಗಿ ತಮ್ಮ ವಿರೋಧವನ್ನು ಬರೆಸಿದರು. ಸಭಾ ತ್ಯಾಗ ಮಾಡಿದ ಬಳಿಕ ಹೊರಬಂದು ಕೇಂದ್ರ ಸರಕಾರವು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸಿದ ಬಗ್ಗೆ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಅವರೊಂದಿಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳಾದ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯ ಪಿ.ಎಫ್.ಸಬಾಸ್ಟೀನ್, ಆಲಿಕುಟ್ಟಿ, ಶಬ್ಬಿರ್, ನಾಗರತ್ನ ಸುರೇಶ್ ಹಾಗೂ ರೇಷ್ಮಾ ಇದ್ದರು.









