


ಮಡಿಕೇರಿ ಜ.22 NEWS DESK : ಕೊಡಗು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ, ಸಂಸ್ಕøತಿ, ಪರಿಸರ, ಕಲೆ, ಜಾನಪದ ಸಂಸ್ಕೃತಿಯ ಸಂರಕ್ಷಣೆಗಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 37 ದತ್ತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಾಲ್ಕು ವರ್ಷಗಳ ಹಿಂದೆ ತಾವು ಅಧಿಕಾರಕ್ಕೆ ಬಂದ ಹಂತದಲ್ಲಿ ಜಿಲ್ಲಾ ಕಸಾಪದಲ್ಲಿದ್ದ 19 ದತ್ತಿಗಳನ್ನು ಪ್ರಸ್ತುತ 37ಕ್ಕೆ ಹೆಚ್ಚಿಸಲಾಗಿದೆ. ಆಗ ಇದ್ದ 2 ಸಾವಿರ ಸದಸ್ಯತ್ವವನ್ನು 3500ಕ್ಕೆ ಹೆಚ್ಚಿಸಲಾಗಿದೆ. ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಂಸ್ಕøತಿಯ ಬೆಳವಣಿಗೆಯ ದೃಷ್ಟಿಯಿಂದ, ಮಕ್ಕಳಲ್ಲಿ ಕನ್ನಡದ ಬಗ್ಗೆ ಒಲವು ಮೂಡಿಸುವುದಕ್ಕಾಗಿ ದತ್ತಿ ನಿಧಿಯ ಬಹುತೇಕ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದ ಶಾಲಾ ಕಾಲೇಜುಗಳಲ್ಲಿ ಆಯೋಜಿಸಿಕೊಂಡು ಬರುತ್ತಿರುವುದಾಗಿ ಹೇಳಿದರು. ದತ್ತಿ ನಿಧಿ ಸ್ಥಾಪಕ ಖ್ಯಾತ ಸಂಶೋಧಕ ಡಾ.ಎಂ.ಜಿ.ನಾಗರಾಜು ಅವರ ಆಶಯಗಳಿಗೆ ಅನುಗುಣವಾಗಿ ಫೆ.14 ರಂದು ಪೊನ್ನಂಪೇಟೆಯ ಅರಣ್ಯ ಕಾಲೇಜಿನಲ್ಲಿ ಕೊಡಗಿನ ದೇವರಕಾಡುಗಳ ಕುರಿತ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ದತ್ತಿ ನಿಧಿಯ ಕಾರ್ಯಕ್ರಮಗಳನ್ನು ಕಸಾಪದ ಜಿಲ್ಲಾ, ತಾಲ್ಲೂಕು, ಹೋಬಳಿ ಘಟಕಗಳು ಸಂಯುಕ್ತವಾಗಿ ಅರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಮಹಿಳಾ ಬರಹಗಾರ್ತಿಯರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ‘ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ’ ಸ್ಥಾಪನೆಯಾದ ಬಳಿಕ ಇಲ್ಲಿಯವರೆಗೆ 23 ಮಹಿಳಾ ಲೇಖಕಿಯರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದರೊಂದಿಗೆ ‘ಬಿ.ಎಸ್ ಗೋಪಾಲಕೃಷ್ಣ’ ಅವರ ದತ್ತಿಯ ಆಶಯದಂತೆ ಜಿಲ್ಲೆಯ ಪುರುಷ ಸಾಹಿತಿಗಳ ಕನ್ನಡದ ಕೃತಿಗಳನ್ನು ಆಯ್ಕೆ ಗೊಳಿಸಿ ಪ್ರಶಸ್ತಿ ಪದಾನ ಕಾರ್ಯಕ್ರಮಗಳನ್ನು ನಡೆಯಲಾರಂಭಿಸಿದೆ. ಇಂತಹ ಪ್ರಯತ್ನಗಳಿಂದ ಜಿಲ್ಲೆಯಲ್ಲಿ ಬರಹಗಾರರ ಸಂಖ್ಯೆ ಹೆಚ್ಚುವುದರೊಂದಿಗೆ ಸಾಹಿತ್ಯಾಸಕ್ತಿಯೂ ಚಿಗುರೊಡೆದಿದೆ ಎಂದರು. ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಸಮಿತಿಗೆ 10 ದತ್ತಿ, ಪೊನ್ನಂಪೇಟೆ ತಾಲ್ಲೂಕು ಸಮಿತಿಗೆ 5, ಕುಶಾಲನಗರ ತಾಲ್ಲೂಕು ಸಮಿತಿಗೆ 6, ವಿರಾಜಪೇಟೆ ತಾಲ್ಲೂಕು ಸಮಿತಿಗೆ 5, ಸೋಮವಾರಪೇಟೆ ತಾಲ್ಲೂಕು ಸಮಿತಿಗೆ 6 ಮತ್ತು ಮಡಿಕೇರಿ ತಾಲ್ಲೂಕು ಸಮಿತಿಗೆ 5 ದತ್ತಿಗಳನ್ನು ನೀಡಲಾಗಿದ್ದು ಅದನ್ನು ದತ್ತಿಗಳ ಆಶಯಕ್ಕೆ ತಕ್ಕಂತೆ ನಡೆಸಲು ತೀರ್ಮಾನಿಸಲಾಗಿದೆಯೆಂದು ತಿಳಿಸಿದರು. ಜಿಲ್ಲಾ ಕಸಾಪದಲ್ಲಿ ಸ್ಥಾಪಿಸಲಾಗಿರುವ ಒಟ್ಟು ದತ್ತಿಗಳಿಂದ ವಾರ್ಷಿಕ 1.07 ಲಕ್ಷ ಬಡ್ಡಿ ಹಣ ಮಾತ್ರ ದೊರಕುತ್ತದೆ. ಇದರಿಂದ 37 ದತ್ತಿ ಕಾರ್ಯಕ್ರಮಗಳನ್ನು ಆಯಾ ಸಾರ್ವಜನಿಕರು, ದಾನಿಗಳ ಸಹಕಾರದಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ಹಿನ್ನೆಲೆ ಜಿಲ್ಲಾ ಕಸಾಪದಲ್ಲಿ 25ಸಾವಿರ, 13ಸಾವಿರ, 10 ಸಾವಿರ ರೂ. ದತ್ತಿ ಸ್ಥಾಪಿಸಿರುವ ದತ್ತಿ ದಾನಿಗಳು ಇನ್ನಷ್ಟು ಹಣ ಅವರವರ ದತ್ತಿಗೆ ನೀಡುವಂತೆ ಟಿ.ಪಿ.ರಮೇಶ್ ಅವರು ಮನವಿ ಮಾಡಿ, ಈ ಕುರಿತು ದತ್ತಿ ದಾನಿಗಳಿಗೆ ಪತ್ರ ಬರೆದು ಕೋರಲಾಗಿದೆಯೆಂದು ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಟಿ.ಪಿ.ರಮೇಶ್, ಗಡಿನಾಡಾದ ಕೇರಳದ ಕಾಸರಗೋಡು ಕನ್ನಡಿಗರು ಹೆಚ್ಚಾಗಿರುವ ಪ್ರದೇಶ. ಅಲ್ಲಿರುವ ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕು ಮುಚ್ಚಲು ಅವಕಾಶ ನೀಡುವುದಿಲ್ಲ, ಈ ಬಗ್ಗೆ ಕಸಾಪ ನಿರ್ಣಯ ಕೈಗೊಂಡು ಕಾರ್ಯೋನ್ಮುಖವಾಗಲಿದೆ ಎಂದರು. ಸುದ್ದಿಗೊಷ್ಠಿಯಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಎಸ್.ಐ.ಮುನೀರ್ ಅಹಮ್ಮದ್, ಪುದಿಯನೆರವನ ರೇವತಿ ರಮೇಶ್, ಕೋಶಾಧಿಕಾರಿ ಸಂಪತ್ ಕುಮಾರ್ ಹಾಗೂ ಸಂಘಟನಾ ಕಾರ್ಯದರ್ಶಿ ವಾಸು ರೈ ಉಪಸ್ಥಿತರಿದ್ದರು.








