
ಮಡಿಕೇರಿ NEWS DESK ಜ.23 : ದಕ್ಷಿಣ ಕೊಡಗಿನ ವಿವಿಧೆಡೆ ಹುಲಿ ಉಪಟಳ ವ್ಯಾಪಕವಾಗಿದೆ. ಗೋಣಿಕೊಪ್ಪ ಮತ್ತು ತಿತಿಮತಿ ಭಾಗದ ಹೆದ್ದಾರಿಯಲ್ಲಿ ಹುಲಿ ಸಂಚರಿಸುತ್ತಿರುವ ದೃಶ್ಯ ಸೆರೆಯಾಗಿದ್ದು, ಗ್ರಾಮಸ್ಥರು ಹಾಗೂ ವಾಹನ ಚಾಲಕರು ಆತಂಕಗೊಂಡಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಹುಲಿ ಸಂಚಾರದ ಕುರಿತು ಅರಣ್ಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ತಕ್ಷಣ ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಹುಲಿ ಸೆರೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಅವರು ಮನವಿ ಮಾಡಿದ್ದಾರೆ. ದಕ್ಷಿಣ ಕೊಡಗಿನ ಗ್ರಾಮೀಣ ಭಾಗದಲ್ಲಿ ನಿರಂತರ ಹುಲಿ ದಾಳಿಯಿಂದ ಹಸುಗಳು ಬಲಿಯಾಗುತ್ತಿವೆ. ಕಾಡಾನೆಗಳು ಕೂಡ ಉಪಟಳ ನೀಡುತ್ತಿದ್ದು, ಗ್ರಾಮಸ್ಥರು ಆತಂಕದಿಂದಲೇ ದಿನ ದೂಡುತ್ತಿದ್ದಾರೆ.
ಸರಕಾರ ಹಾಗೂ ಅರಣ್ಯ ಇಲಾಖೆ ವನ್ಯಜೀವಿ ಉಪಟಳದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಒತ್ತಾಯಿಸಿವೆ.








