
ಹುಬ್ಬಳ್ಳಿ ನ.23 NEWS DESK : ಹುಬ್ಬಳ್ಳಿಯ ಮರಾಠಗಲ್ಲಿಯಲ್ಲಿರುವ ಮೆಟ್ರೋ ಮಾಲ್‌ನಲ್ಲಿ ತಡರಾತ್ರಿ ಭಾರೀ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಗುರುವಾರ ತಡರಾತ್ರಿ ಮೂರು ಅಂತಸ್ತಿನ ಈ ವಾಣಿಜ್ಯ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಮಾಹಿತಿಯ ಪ್ರಕಾರ, ತಡರಾತ್ರಿ ವಿದ್ಯುತ್ ಹೋಗಿ ಮತ್ತೆ ಬಂದ ಕೆಲವೇ ಸಮಯದೊಳಗೆ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಶಾರ್ಟ್ ಸರ್ಕ್ಯೂಟ್ ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು, ಮಾಲ್‌ನೊಳಗೆ ಇದ್ದ ಬಟ್ಟೆ ಅಂಗಡಿಗಳು, ಶೂ ಮತ್ತು ಚಪ್ಪಲಿ ಸೇರಿದಂತೆ ವಿವಿಧ ವಸ್ತುಗಳ ಅಂಗಡಿಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ. ಘಟನೆ ನಡೆದ ಸಮಯದಲ್ಲಿ ಮಾಲ್‌ನಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಸಂಯುಕ್ತವಾಗಿ ಪ್ರಾಥಮಿಕ ತನಿಖೆ ಕೈಗೊಂಡಿವೆ.


















