
ವಿರಾಜಪೇಟೆ ಜ.26 NEWS DESK : ಹೆಗ್ಗಳ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಎಸ್ ಡಿ ಎಂ ಸಿ ಸದಸ್ಯ ಟಿ.ಆರ್.ವಿನೋದ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಸಂವಿಧಾನದ ಪ್ರಸ್ತಾವನೆಯ ಪೂರ್ವ ಪೀಠಿಕೆಯ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. ವಿರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕರು ಹಾಗೂ ಎನ್ ಎಸ್ ಎಸ್ ಅಧಿಕಾರಿ ಬಿ.ಎನ್.ಶಾಂತಿಭೂಷಣ್ ಬೋರ್ಕರ್ ದಿನದ ಮಹತ್ವದ ಕುರಿತು ಮಾತನಾಡಿ, ಭಾರತವು ವಿಶ್ವದಲ್ಲಿಯೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಸಂವಿಧಾನವು ಅತ್ಯಂತ ಶ್ರೇಷ್ಠವಾಗಿದೆ. ಸಂವಿಧಾನವು ಪ್ರಜೆಗಳಿಗೆ ಹಕ್ಕುಗಳನ್ನು ನೀಡಿದ್ದು, ಕಾನೂನಿನ ಪರಿಪಾಲನೆ ಅತೀ ಮುಖ್ಯವಾಗಿದೆ ಎಂದರು. ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಬ್ರಾತೃತ್ವ ಗಳು ಸಂವಿಧಾನದ ಪ್ರಮುಖ ಮೂಲಾಂಶಗಳಾಗಿದ್ದು, ಸಂವಿಧಾನದ ಮೌಲ್ಯಗಳಿಗೆ ಗೌರವವನ್ನು ಸೂಚಿಸಿ ಸದೃಢ ರಾಷ್ಟ್ರದ ನಿರ್ಮಾಣಕ್ಕೆ ಸರ್ವರೂ ಪಣ ತೊಡಬೇಕು ಎಂದು ಹೇಳಿದರು. ಶಾಲಾ ಮುಖ್ಯ ಶಿಕ್ಷಕಿ ಕಮಲಮ್ಮ ಮಾತನಾಡಿ, ಸಂವಿಧಾನವು ಪ್ರತಿಯೊಬ್ಬ ಭಾರತೀಯನ ಸಾರ್ವಭೌಮದ ಪ್ರತೀಕವಾಗಿದೆ. ಸಮಾನತೆಯ ನೆಲೆಗಟ್ಟನ್ನು ಕಲ್ಪಿಸಿ ಐಕ್ಯತೆಯನ್ನು ಮೂಡಿಸುತ್ತದೆ. ಸಂವಿಧಾನದ ಆಶಯದಂತೆ ಕಾನೂನನ್ನು ಪ್ರತಿಯೊಬ್ಬರು ಗೌರವಿಸಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶಾಂತಿ, ಸ್ಥಳೀಯ ಮುಖಂಡರಾದ ವರ್ಗೀಸ್, ಸಹ ಶಿಕ್ಷಕಿ ಕಮರುನ್ನಿಸ, ನಿವೃತ್ತ ಯೋಧರಾದ ಬಿ.ಎಸ್.ಗೋಪಾಲ್ ರಾಜ್, ಸುಮಂತ್, ಎಲಿಯಮ್ಮ, ತಿಲೋತ್ತಮ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.









