
ಮಡಿಕೇರಿ NEWS DESK ಜ.30 : ದಲಿತ ಸಂಘರ್ಷ ಸಮಿತಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಪ್ರಯುಕ್ತ ‘ಸ್ವಾಭಿಮಾನಿ ಸಮಾವೇಶ’ ಫೆ.22 ರಂದು ಮಡಿಕೇರಿಯಲ್ಲಿ ನಡೆಯಲಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು, ಮಡಿಕೇರಿಯ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 11 ಗಂಟೆಗೆ ಅಶೋಕಪುರದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಗುವುದು. ನಂತರ ಗಾಂಧಿ ಮೈದಾನದವರೆಗೆ ಮೆರವಣಿಗೆ ನಡೆಯಲಿದ್ದು, 100 ಬೈಕ್‌ಗಳು, ಪೂರ್ವಿಕರ ಸ್ತಬ್ಧಚಿತ್ರ, ಡೊಳ್ಳು ಕುಣಿತ, ವೀರಗಾಸೆ ಕುಣಿತ ಇರಲಿದೆ. ಇದರೊಂದಿಗೆ ಬುದ್ಧ, ಅಂಬೇಡ್ಕರ್ ಅವರ ರಥ ಗಮನ ಸೆಳೆಯಲಿದೆ ಎಂದರು. ಮಧ್ಯಾಹ್ನ 2 ಗಂಟೆಗೆ ಗಾಂಧಿ ಮೈದಾನದಲ್ಲಿ ಸ್ವಾಭಿಮಾನಿ ಸಮಾವೇಶದ ಸಭಾ ಕಾರ್ಯಕ್ರಮ ನಡೆಯಲಿದ್ದು, ಸುಮಾರು 5000 ಮಂದಿ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಇದೇ ಸಂದರ್ಭ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ‘ದಲಿತ ರತ್ನ’ ಪ್ರಶಸ್ತಿ ನೀಡಲಾಗುವುದು ಹಾಗೂ ಜಿಲ್ಲೆಯ ಶಾಸಕದ್ವಯರಿಗೂ ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದಲ್ಲಿ ‘ಕೊಡಗು ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹೋರಾಟಗಾರ ಜಯಪ್ಪ ಹಾನಗಲ್, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿವೃತ್ತ ನೌಕರರರ ಸಮಿತಿಯ ಅಧ್ಯಕ್ಷ ಸಿದ್ದಯ್ಯ ಹಾಗೂ ಸಮಾಜ ಸೇವಕ ಡಾ.ಹೆಚ್.ವಿ.ದೇವದಾಸ್ ಅವರಿಗೆ ‘ಕೊಡಗು ಭೂಷಣ ಪ್ರಶಸ್ತಿ ನೀಡಲಾಗುವುದು’ ಎಂದು ಮಾಹಿತಿ ನೀಡಿದರು. ದಲಿತ ಸಂಘರ್ಷ ಸಮಿತಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಮೂಲಕ ಪ್ರೋತ್ಸಾಹ ನೀಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಶಾಲೆಗಳಿಗೆ ಪುಸ್ತಕ ವಿತರಣೆ, ಸ್ವಚ್ಛತಾ ಸಿಬ್ಬಂದಿಗಳಿಗೆ ಸ್ವೆಟರ್ ವಿತರಣೆ, ಆಹಾರ ಕಿಟ್ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ ಎಂದು ಹೆಚ್.ಎಲ್.ದಿವಾಕರ್ ತಿಳಿಸಿದರು. ರಾಜ್ಯ ಸಮಿತಿಯ ಸದಸ್ಯ ಎನ್.ವೀರಭದ್ರಯ್ಯ ಅವರು ಮಾತನಾಡಿ, ಜಿಲ್ಲೆಯಲ್ಲಿರುವ ಬಡವರಿಗೆ ವಸತಿ ಅಥವಾ ನಿವೇಶನ ಕಲ್ಪಿಸಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಪ್ರೇಮ ಕೃಷ್ಣಪ್ಪ ಅವರು ಮಾತನಾಡಿ ಮಡಿಕೇರಿಯಲ್ಲಿ ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಾಗವನ್ನು ದಲಿತ ಸಂಘರ್ಷ ಸಮಿತಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಟಿ.ಜೆ.ಈರಪ್ಪ, ಪೊನ್ನಂಪೇಟೆ ತಾಲ್ಲೂಕು ಸಂಚಾಲಕ ಜಗದೀಶ್ ಹಾಗೂ ಮಡಿಕೇರಿ ನಗರ ಸಂಚಾಲಕ ಎಂ.ಕೆ.ವೇಣು ಕಿಶೋರ್ ಉಪಸ್ಥಿತರಿದ್ದರು.









