
ವಿರಾಜಪೇಟೆ ಜ.31 NEWS DESK : ವಿರಾಜಪೇಟೆ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆಯ ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆ ಮತ್ತು ಸಂತ ಅನ್ನಮ್ಮ ಶಾಲೆ ಸಂಯುಕ್ತ ಆಶ್ರಯದಲ್ಲಿ ಸಂತ ಅನ್ನಮ್ಮ ಶಾಲೆಯ ಸಭಾಂಗಣದಲ್ಲಿ ರಸ್ತೆ ಸುರಕ್ಷತಾ ಅಭಿಯಾನ ಮತ್ತು ಜಾಗೃತಿ ಜಾತ ನಡೆಯಿತು. ಸಂತ ಅನ್ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾದ ಟಿನಾ ಪೆರ್ನಾಂಡಿಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ವಿರಾಜಪೇಟೆ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನಟರಾಜ ಅವರು ಉದ್ಘಾಟಿಸಿ ಮಾತಾನಾಡಿ, ರಸ್ತೆಗಳು ನಮ್ಮ ಬದುಕಿನ ಭಾಗ. ನಾವು ಪ್ರತಿದಿನ ಮಾಡುವಂತಹ ಕೆಲಸ ಕಾರ್ಯಗಳನ್ನು ರಸ್ತೆಯಿಲ್ಲದೆ ಮಾಡಲು ಸಾಧ್ಯವಿಲ್ಲ. ನಮ್ಮ ಜೀವನದ ಭಾಗವಾಗಿರುವ ರಸ್ತೆಗಳನ್ನು ಹೇಗೆ ಉಪಯೋಗ ಮಾಡಬೇಕು, ಎಷ್ಟು ಮುಖ್ಯವಾಗಿ ನಾವು ನಮ್ಮ ಜೀವವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸುವ ಉದ್ದೇಶವೆ ಈ ಕಾರ್ಯಕ್ರಮದ ಮುಖ್ಯ ದ್ಯೇಯ ಎಂದು ಹೇಳಿದರು. ನನ್ನ ವೃತ್ತಿ ಬದುಕಿನಲ್ಲಿ ಹಲವಾರು ಅಪಘಾತ ಪ್ರಕರಣಗಳನ್ನು ನೋಡಿದ್ದೇನೆ, ಆದರೆ ಭಾರತ ದೇಶದಲ್ಲಿ ಅತ್ಯಂತ ಕಳವಳಕಾರಿ ವಿಷಯವೆನೆಂದರೆ ಯುವಕರು ಮತ್ತು ವಿದ್ಯಾರ್ಥಿಗಳು ವಾಹನ ಅಪಘಾತದಲ್ಲಿ ಬಲಿಯಾಗುತ್ತಿರುವುದು ದುರ್ದೈವ. ಆದ್ದರಿಂದ ಅಪಘಾತ ತಡೆ ಮತ್ತು ಸುರಕ್ಷತ ಕ್ರಮದ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ವಿರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್ ಮಾತನಾಡಿ, ರಸ್ತೆ ಅಪಘಾತ ನಡೆಯದಂತೆ ಮತ್ತು ಕಾನೂನು ಪರಿಪಾಲನೆ ಮಾಡಲು ನಾವು ಮತ್ತು ನಮ್ಮ ಮನೆಯವರು ಕಲಿಯಬೇಕು ಹಾಗೂ ಇತರರಿಗೂ ಕಲಿಸಬೇಕು, ಕಾನೂನಿನ ವಿರುದ್ಧವಾಗಿ ವಾಹನ ಚಾಲನೆ ಮಾಡಿದಲ್ಲಿ ದಂಡದ ಜೊತೆಗೆ ಕಾನೂನಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು, ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಾಲನೆ ಮಾಡುವುದು ಕಾನೂನು ಬಾಹಿರವಾಗಿದ್ದು, ಈ ಬಗ್ಗೆ ಪೋಷಕರು ಸಹ ಎಚ್ಚರ ವಹಿಸಬೇಕು, ದ್ವಿ ಚಕ್ರ ವಾಹನ ಚಾಲನೆ ಮಾಡುವವರು ತಪ್ಪದೇ ಹೆಲ್ಮೆಟ್ ಧರಿಸಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಈ ಸಂದರ್ಭ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಹಾಗೂ ಸದಸ್ಯರು ವಿರಾಜಪೇಟೆ ಕಾನೂನು ಸೇವಾ ಸಮಿತಿ ಸದಸ್ಯರಾದ ನ್ಯಾ. ಮಂಜುನಾಥ್ ಆರ್ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ವಿರಾಜಪೇಟೆ ಹಾಗೂ ಸದಸ್ಯರು ಕಾರ್ಯದರ್ಶಿಗಳು ತಾಲೂಕು ಸೇವಾ ಸಮಿತಿ ನ್ಯಾ ಪ್ರದೀಪ್ ಪೂತದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಜೆ.ಆನಂದ್ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸಿ.ಎಂ.ಸೋಮಯ್ಯ ಮತ್ತು ವಕೀಲರ ಸಂಘದ ಅಧ್ಯಕ್ಷರಾದ ಸಿ.ಕೆ.ಪೂವಣ್ಣ, ಪೊಲೀಸ್ ಅಧಿಕಾರಿ ಕಾವೇರಪ್ಪ, ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ನ್ಯಾಯಮೂರ್ತಿಗಳು ರಸ್ತೆ ಸುರಕ್ಷತಾ ಜಾಗೃತಿ ಜಾಥಕ್ಕೆ ಚಾಲನೆ ನೀಡಿದರು. ಜಾಥದಲ್ಲಿ ರೋಟರಿ ಶಾಲೆ, ಸಂತ ಅನ್ನಮ್ಮ ಶಾಲೆ, ಪ್ರಗತಿ ಶಾಲೆ, ತ್ರಿವೇಣಿ ಶಾಲೆ, ಕೂರ್ಗ್ ವ್ಯಾಲಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.









