
ಮಡಿಕೇರಿ ಜ.31 NEWS DESK : ಮೈಸೂರು- ಕುಶಾಲನಗರ ನಡುವಿನ ಸುಮಾರು 87 ಕಿ.ಮೀ ಉದ್ದದ ರೈಲು ಮಾರ್ಗದ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಪೂರ್ಣಗೊಳಿಸಿದೆ. ಆದರೆ ಸಂಸದ ಯದುವೀರ್ ಒಡೆಯರ್ ಅವರು ಈ ವಿಚಾರದಲ್ಲಿ ರಾಜ್ಯ ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಟೀಕಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೈಸೂರು- ಕುಶಾಲನಗರ ರೈಲು ಮಾರ್ಗದ ಯೋಜನೆ ಆರ್ಥಿಕವಾಗಿ ಲಾಭದಾಯಕವಲ್ಲ ಎನ್ನುವ ಕಾರಣಕ್ಕೆ ರೈಲ್ವೆ ಇಲಾಖೆ ಈ ಯೋಜನೆಯನ್ನು ಕೈಬಿಟ್ಟಿದೆ. ಆದರೆ ಸಂಸದರು ರಾಜ್ಯ ಸರಕಾರ ಭೂಸ್ವಾಧೀನ ಪಡಿಸಿಕೊಳ್ಳುವಲ್ಲಿ ವಿಳಂಬ ಮಾಡಿರುವುದು ಕಾರಣವೆಂದು ಸುಳ್ಳು ಹೇಳಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯದುವೀರ್ ಒಡೆಯರ್ ಅವರು ಸಂಸದರಾದ ನಂತರ ಅನೇಕ ಯೋಜನೆಗಳು ಸ್ಥಗಿತಗೊಂಡಿವೆ. ರಾಜ್ಯದ ಒಟ್ಟು 236 ತಾಲ್ಲೂಕುಗಳಲ್ಲಿ ಕೊಡಗು ಜಿಲ್ಲೆಯ 5 ತಾಲ್ಲೂಕುಗಳು ಸೇರಿದಂತೆ 80 ತಾಲ್ಲೂಕುಗಳಿಗೆ ಇಂದಿಗೂ ರೈಲ್ವೆ ಮಾರ್ಗವಿಲ್ಲ ಎಂದರು. ಕರಕುಶಲ ಕರ್ಮಿಗಳಿಗೆ ಉತ್ತೇಜನ ನೀಡಲು ‘ಒಂದು ಜಿಲ್ಲೆ, ಒಂದು ಉತ್ಪಾದನೆ’ ಯೋಜನೆಯಡಿ 193 ಕೋಟಿ ರೂ.ಗಳ ಯೂನಿಟ್ ಮಾಲ್ ತರಬೇತಿ ಕೇಂದ್ರ ಸ್ಥಾಪನೆಗೆ ಕೇಂದ್ರ ಸರಕಾರದ ಮೂಲಕ ಮಂಜೂರಾತಿ ದೊರೆತಿತ್ತು. ರಾಜ್ಯ ಸರಕಾರ ಇದಕ್ಕಾಗಿ ಮೈಸೂರಿನಲ್ಲಿ ಆರೂವರೆ ಎಕರೆ ಜಾಗವನ್ನು ಕೂಡ ನೀಡಿತ್ತು. ಸಂಸದ ಯದುವೀರ್ ಅವರು ಈ ಯೋಜನೆಗೆ ಭೂಮಿಪೂಜೆಯನ್ನು ಕೂಡ ನೆರವೇರಿಸಿದ್ದರು. ಆದರೆ ನಂತರದ ದಿನಗಳಲ್ಲಿ ಸಂಸದರ ತಾಯಿ ಇದು ನಮಗೆ ಸೇರಿದ ಜಾಗವೆಂದು ತಕರಾರು ತೆಗೆದರು. ಇದರಿಂದ 4ಲಕ್ಷ ಕರಕುಶಲ ಕರ್ಮಿಗಳಿಗೆ ತರಬೇತಿ ನೀಡಲು ಅನುಕೂಲಕರವಾಗಿದ್ದ ಯೋಜನೆ ಸ್ಥಗಿತಗೊಂಡಿದೆ ಎಂದು ಆರೋಪಿಸಿದರು. ಚಾಮುಂಡಿ ಬೆಟ್ಟದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು 46 ಕೋಟಿ ರೂ.ಗಳ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ ಇದು ಕೂಡ ನೆನೆಗುದಿಗೆ ಬಿದ್ದಿದೆ. ಸುಮಾರು 175 ಕೋಟಿ ರೂ.ಗಳ ಕ್ಯಾನ್ಸರ್ ಸೆಂಟರ್ ಸ್ಥಾಪನೆಯಾಗಿಲ್ಲ, ಮೈಸೂರು ಏರ್‍ಪೋರ್ಟ್ ವಿಸ್ತರಣೆ ಕಾರ್ಯಕ್ಕೆ ಕಾಳಜಿ ತೋರಿಲ್ಲ, ರಿಂಗ್ ರೋಡ್ ಗೆ ಎಳ್ಳುನೀರು ಬಿಡಲಾಗಿದೆ ಎಂದು ಟೀಕಿಸಿದರು. ಐಟಿ ಮತ್ತು ಇಡಿ ದಾಳಿ ವಿರೋಧ ಪಕ್ಷದವರ ಮೇಲೆಯೇ ನಡೆದಿದೆ, ಬಿಜೆಪಿಯವರು ಈ ದಾಳಿಯಲ್ಲಿ ಗುರಿಯಾಗುತ್ತಿಲ್ಲ. ಉದ್ಯಮಿ ಸಿ.ಜೆ.ರಾಯ್ ಅವರು ಆತ್ಮಹತ್ಯೆಗೆ ಶರಣಾಗಲು ಐಟಿ ದಾಳಿಯೇ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದ ಎಂ.ಲಕ್ಷ್ಮಣ್, ದಾಳಿ ಮಾಡಿದವರ ವಿರುದ್ಧ ರಾಜ್ಯ ಸರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು. *ಶ್ವೇತಪತ್ರ ಹೊರಡಿಸಲಿ* ಯದುವೀರ್ ಅವರು ಸಂಸದರಾದ ನಂತರ ಮೈಸೂರು ಹಾಗೂ ಕೊಡಗು ಜಿಲ್ಲೆಗೆ ಕೇಂದ್ರದದಿಂದ ಯಾವ ಯೋಜನೆಯನ್ನು ತಂದಿದ್ದಾರೆ ಎನ್ನುವ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು. ಕೊಡಗಿನ ಮಾಜಿ ಶಾಸಕರುಗಳು ಈಗಿನ ಶಾಸಕರುಗಳ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚೆಗೆ ಬರಲಿ, ದಾಖಲೆ ಸಹಿತ ನಾವು ಚರ್ಚೆಗೆ ಸಿದ್ಧರಿದ್ದೇವೆ. ಇಂದು ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ, ನಾವು ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುವವರಲ್ಲ, ಅಭಿವೃದ್ಧಿಯ ಆಧಾರದಲ್ಲಿ ರಾಜಕಾರಣ ಮಾಡುವವರು. ಇಲ್ಲಿರುವವರೆಲ್ಲರೂ ಭಾರತಮಾತೆಯ ಮಕ್ಕಳು, ಜಿಲ್ಲೆಯ ಶಾಸಕದ್ವಯರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.
ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಅವರು ಮಾತನಾಡಿ ವಿಬಿ.ಜಿ.ರಾಮ್ ಜಿ ಯೋಜನೆಯಿಂದಾಗುವ ದುಷ್ಪರಿಣಾಮದ ಕುರಿತು ಕಾಂಗ್ರೆಸ್ ಪಕ್ಷದಿಂದ ಜನಜಾಗೃತಿ ಮೂಡಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಮುಖ ಹೆಚ್.ಎಂ.ನಂದಕುಮಾರ್, ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು ಹಾಗೂ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ ಉಪಸ್ಥಿತರಿದ್ದರು.









