
ಮಡಿಕೇರಿ NEWS DESK ಜ.31 : ನಾಪೋಕ್ಲುವಿನಲ್ಲಿ ಗೊಂದಲ ಸೃಷ್ಟಿಸಿರುವ ಶಾದಿಮಹಲ್ ಸೇರಿದಂತೆ ಜಿಲ್ಲೆಯ ವಿವಿಧ ವಿಚಾರಗಳ ಕುರಿತು ಜಿಲ್ಲಾ ಕಾಂಗ್ರೆಸ್ ವಕ್ತಾರರೊಬ್ಬರು ವಿನಾಕಾರಣ ಮಾಜಿ ಶಾಸಕರುಗಳನ್ನು ಗುರಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆಯಲ್ಲಿ ತೊಡಗಿದ್ದಾರೆ. ಇದನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲವೆಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಒಲೈಸಿಕೊಳ್ಳುವ ಏಕೈಕ ಉದ್ದೇಶದಿಂದ ಮಾಜಿ ಶಾಸಕರುಗಳ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ವ್ಯಕ್ತಿ ಕೀಳು ಮಟ್ಟದ ಭಾಷೆಗಳನ್ನು ಬಳಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಗೆ ಸೇರಿದ ಜಾಗದಲ್ಲಿ ಶಾದಿಮಹಲ್ ನಿರ್ಮಾಣಗೊಳ್ಳುತ್ತಿರುವ ಬಗ್ಗೆ ಬಿಜೆಪಿ ನಿಯಮಾನುಸಾರ ಆಕ್ಷೇಪ ವ್ಯಕ್ತಪಡಿಸಿತ್ತು. ಜಿಲ್ಲಾಧಿಕಾರಿಗಳು ಕೂಡ ಕಾನೂನಿನಂತೆ ಕಾಮಗಾರಿ ಸ್ಥಗಿತಕ್ಕೆ ಆದೇಶ ನೀಡಿದ್ದಾರೆ. ಸರ್ವೆಯ ಮೂಲಕ ಸತ್ಯಾಂಶ ಹೊರ ಬೀಳುವವರೆಗೆ ಕಾಯುವಷ್ಟು ತಾಳ್ಮೆ ಇಲ್ಲದ ಕಾಂಗ್ರೆಸ್ ವಕ್ತಾರರು ಈ ವಿಚಾರದಲ್ಲಿ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ತೇಜೋವಧೆ ಮಾಡಿದ್ದಾರೆ. ಶಾದಿಮಹಲ್ ವಿಚಾರದಲ್ಲಿ ಸೃಷ್ಟಿಯಾಗಿರುವ ಗೊಂದಲಗಳಿಗೆ ಕಾಂಗ್ರೆಸ್ ಪ್ರತಿನಿಧಿಗಳು ನೇರ ಹೊಣೆಗಾರರೇ ಹೊರತು ಮಾಜಿ ಶಾಸಕರು ಅಲ್ಲ. ಕರ್ನಾಟಕ ಪಬ್ಲಿಕ್ ಶಾಲೆಗೆ ಸಂಬಂಧಿಸಿದ ಜಾಗದ ಕುರಿತು ಚರ್ಚೆಗೆ ದಾಖಲೆ ಸಹಿತ ನಾವು ಬರಲು ಸಿದ್ಧರಿದ್ದೇವೆ, ಕಾಂಗ್ರೆಸ್ಸಿಗರು ಒಂದೇ ವೇದಿಕೆಗೆ ಬರಲಿ ಎಂದು ರಾಕೇಶ್ ದೇವಯ್ಯ ಸವಾಲು ಹಾಕಿದ್ದಾರೆ. ಜಮ್ಮಾಬಾಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧಪಡಿಸಿ ಎಂದು ಮಾಜಿ ಶಾಸಕರು ಕರೆ ನೀಡಿದ್ದರೂ ಇಲ್ಲಿಯವರೆಗೆ ಶಾಸಕರುಗಳು ಚರ್ಚೆಗೆ ಬಂದಿಲ್ಲ. ಕೇವಲ ಜನರ ಹಾದಿ ತಪ್ಪಿಸುವುದಕ್ಕಾಗಿ ಪಕ್ಷದ ವಕ್ತಾರರಿಂದ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಸತ್ಯ ಬಯಲಾಗುತ್ತದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ಸಿಗರು ಬಹಿರಂಗ ಚರ್ಚೆಗೆ ಸಿದ್ಧರಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಿನಿಂದ ಹಗರಣಗಳ ಮೇಲೆ ಹಗರಣಗಳು ನಡೆಯುತ್ತಲೇ ಇದೆ. ಈ ಹಿಂದೆ ಇದ್ದ ಬಿಜೆಪಿ ಸರಕಾರವನ್ನು 40 ಪರ್ಸೆಂಟ್ ಸರಕಾರವೆಂದು ಟೀಕಿಸುತ್ತಿದ್ದ ಕಾಂಗ್ರೆಸ್ ಗೆ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದ್ದರೂ ಆರೋಪವನ್ನು ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಹಗರಣಗಳನ್ನು ಮುಚ್ಚಿ ಹಾಕುವ ಯತ್ನವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಷಯಾಂತರದ ಚರ್ಚೆಗಳನ್ನು ಹುಟ್ಟು ಹಾಕಿ ಜನರ ಹಾದಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ವಕ್ತಾರರು ಭಾಷೆಯ ಮೇಲೆ ಹಿಡಿತ ಸಾಧಿಸದಿದ್ದಲ್ಲಿ ಅದೇ ಭಾಷೆಯಲ್ಲಿ ತಿರುಗೇಟು ನೀಡಲು ಬಿಜೆಪಿಗೂ ತಿಳಿದಿದೆ ಎಂದು ರಾಕೇಶ್ ದೇವಯ್ಯ ಎಚ್ಚರಿಕೆ ನೀಡಿದ್ದಾರೆ.









