
ಮಡಿಕೇರಿ NEWS DESK ಫೆ.2 : ದೃಢ ನಿರ್ಧಾರ ಹಾಗೂ ಸತತ ಪರಿಶ್ರಮದಿಂದ ಮಾತ್ರ ಜೀವನದ ಗುರಿಯನ್ನು ಸಾಧಿಸಲು ಸಾಧ್ಯ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ನ ಮಡಿಕೇರಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್ ಅವರು ತಿಳಿಸಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಮೂರ್ನಾಡುವಿನ ಕೋಡಂಬೂರು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗಾಗಿ ವಿರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿ ನಡೆದ ಚಾರಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಶಿಸ್ತು, ಸಂಯಮವನ್ನು ಕಲಿಸುವುದರ ಜೊತೆಗೆ ಸೇವಾ ಮನೋಭಾವವನ್ನು ವೃದ್ಧಿಸುತ್ತದೆ. ಧೈರ್ಯ, ಸಾಹಸ, ನಿಷ್ಠೆ, ಪ್ರಾಮಾಣಿಕತೆ, ದೇಶಪ್ರೇಮವನ್ನು ಬೆಳೆಸುತ್ತದೆ. ಪರಿಶ್ರಮದಿಂದ ಗುರಿ ಸಾಧಿಸುವ ಚಾರಣವು ಜೀವನದ ಪಾಠವನ್ನು ಹೇಳುತ್ತದೆ. ಸಾಧನೆಗೆ ದೃಢ ನಿರ್ಧಾರ ಅಗತ್ಯ, ಚಾರಣ ಮಾಡುವ ಸಂದರ್ಭ ದೇಹಕ್ಕೆ ಆಯಾಸವಾಗಬಹುದು. ಆದರೆ ಸುತ್ತಮುತ್ತಲ ಹಸಿರ ಪರಿಸರ, ಬೆಟ್ಟಗುಡ್ಡ, ಮರಗಿಡಗಳು, ಸುಂದರವಾದ ಹೂವುಗಳು ಮತ್ತು ಪಕ್ಷಿಗಳನ್ನು ಕಂಡಾಗ ಮನಸ್ಸಿನಲ್ಲಿ ಹೊಸ ಚೈತನ್ಯ ಮೂಡುತ್ತದೆ. ಸಹಪಾಠಿಗಳೊಂದಿಗೆ ಬೆಟ್ಟದ ತುದಿಗೇರಿದಾಗ ಆಗುವ ಅದ್ಭುತ ಅನುಭವ ಹಾಗೂ ಸಂತೋಷವೇ ಬೇರೆ ಎಂದು ತಿಳಿಸಿದರು. ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ನ ನಿಯಮಗಳನ್ನು ಪಾಲಿಸುವಂತೆ ಹರಿಣಿ ವಿಜಯ್ ಕರೆ ನೀಡಿದರು. ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಶಿಲ್ಪಾ ಪೊನ್ನಮ್ಮ ಅವರು ಶಾಲೆಯ ಮುಖ್ಯದ್ವಾರದಲ್ಲಿ ಚಾರಣವನ್ನು ಉದ್ಘಾಟಿಸಿದರು. ದಂತ ಕಾಲೇಜ್ ಗೆ ಭೇಟಿ ನೀಡಿದ ವಿದಾರ್ಥಿಗಳಿಗೆ ಹರಿಣಿ ವಿಜಯ್ ಅವರು ಸೂಕ್ತ ಮಾಹಿತಿಯನ್ನು ನೀಡಿದರು. ನಂತರ ವಿದ್ಯಾರ್ಥಿಗಳು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಾರ್ಥನೆ ಹಾಗೂ ಧ್ವಜಗೀತೆಯ ನಂತರ ವಿದ್ಯಾರ್ಥಿಗಳಿಗೆ ದೀಕ್ಷಾ ಸಮಾರಂಭ ನಡೆಯಿತು. ಶಾಲಾ ಸ್ಕೌಟ್ಸ್ ಶಿಕ್ಷಕಿ ಸುನೀತ ಸ್ವಾಗತಿಸಿದರು, ಗೈಡ್ಸ್ ಶಿಕ್ಷಕಿ ಸ್ವರ್ಣಲತಾ ವಂದಿಸಿದರು. ಮಡಿಕೇರಿ ಸ್ಥಳೀಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಆರ್.ಪಿ, ಸದಸ್ಯ ಸೂರಜ್ ತಿಮ್ಮಯ್ಯ, ಚಾರಣಕ್ಕೆ ಸಹಕಾರ ನೀಡಿದ ಹಿಮಾಲಯನ್ ವುಡ್ ಬ್ಯಾಡ್ಜ್ ನ ಗುಲ್ಶನ್ ಮತ್ತಿತರರು ಉಪಸ್ಥಿತರಿದ್ದರು.










