
ಮಡಿಕೇರಿ NEWS DESK ಫೆ.4 : ತಮ್ಮ ರಚನೆಯ ಹಲವು ಲೇಖನಗಳ “ಬಹುರೂಪಿ”ಯನ್ನು ಹಿರಿಯ ರಾಜಕಾರಣಿ ಹಾಗೂ ವಿಚಾರವಾದಿಗಳಾಗಿದ್ದ ದಿವಂಗತ ಎ.ಕೆ.ಸುಬ್ಬಯ್ಯ ಅವರಿಗೆ ಅರ್ಪಣೆ ಮಾಡುತ್ತಿದ್ದು, ಪುಸ್ತಕ ಅನಾವರಣ ಕಾರ್ಯಕ್ರಮ ಫೆ.5ರಂದು ಬೆಳಗ್ಗೆ 10 ಗಂಟೆಗೆ ನಗರದ ಗಾಂಧಿ ಭವನದಲ್ಲಿ ನಡೆಯಲಿದೆ ಎಂದು ಕೃತಿಯ ಲೇಖಕ ಅಲ್ಲಾರಂಡ ವಿಠಲ ನಂಜಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು 56 ಲೇಖನಗಳನ್ನು ಒಳಗೊಂಡ, 300 ಪುಟಗಳ ಬಹುರೂಪಿ ಪುಸ್ತಕದಲ್ಲಿ, ಎ.ಕೆ.ಸುಬ್ಬಯ್ಯ ಅವರು 2018ರಲ್ಲಿ ತಮಗೆ ಬರೆದು ಕೊಟ್ಟಿರುವ ವಿಚಾರವನ್ನು ಪುಸ್ತಕದ ಆರಂಭದಲ್ಲೆ ಬಳಸಿಕೊಳ್ಳಲಾಗಿದೆ. ಪುಸ್ತಕದ ಮುನ್ನಡಿಯನ್ನು ಕನ್ನಡ ವಿಶ್ವ ವಿದ್ಯಾನಿಲಯದ ಕುಲಸಚಿವರಾದ ತಂಬAಡ ವಿಜು ಪೂಣಚ್ಚ ಅವರು ಬರೆದಿದ್ದಾರೆ, ಬೆನ್ನುಡಿಯನ್ನು ವಿಮರ್ಶಕರು ಹಾಗೂ ಅನುವಾದಕರಾದ ಒ.ಎಲ್.ನಾಗಭೂಷಣ ಸ್ವಾಮಿ ಅವರು ಬರೆದಿದ್ದಾರೆಂದು ಮಾಹಿತಿಯನ್ನಿತ್ತರು. ಎ.ಕೆ.ಎಸ್. ಪುತ್ರನಿಗೆ ಮೊದಲ ಪ್ರತಿ- ಪುಸ್ತಕ ಅನಾವರಣ ಸಮಾರಂಭದಲ್ಲಿ ಬಹುರೂಪಿಯ ಮೊದಲ ಪ್ರತಿಯನ್ನು ಎ.ಕೆ.ಸುಬ್ಬಯ್ಯ ಅವರ ಪುತ್ರ ಅಜ್ಜಿಕುಟ್ಟೀರ ನರೇಶ್ ಅವರಿಗೆ ನೀಡಲಾಗುತ್ತದೆ. ಕಾರ್ಯಕ್ರಮದಲ್ಲಿ ಎಕೆಎಸ್ ಅವರ ಮತ್ತೋರ್ವ ಪುತ್ರರಾದ ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪುಸ್ತಕದ ಕುರಿತಾಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವ ಸಾಹಿತಿಗಳಾದ ಕೆ.ಪಿ.ಬಾಲಸುಬ್ರಹ್ಮಣ್ಯ, ಬ್ರಹ್ಮಗಿರಿ ಪತ್ರಿಕೆಯ ಸಂಪಾದಕರಾದ ಯು.ಎಂ.ಪೂವಯ್ಯ, ಮೈಸೂರಿನ ಬಾರುಕೋಲು ಪತ್ರಿಕೆಯ ಸಂಪಾದಕರಾದ ಬಿ.ಆರ್.ರಂಗಸ್ವಾಮಿ, ಸಂಸ್ಕೃತಿ ಚಿಂತಕರಾದ ಪ್ರೊ.ಟಿ.ರಂಗಪ್ಪ ಮಾತನಾಡಲಿದ್ದಾರೆಂದು ಮಾಹಿತಿಯನ್ನಿತರು. ಸನ್ಮಾನ-ಕಾರ್ಯಕ್ರಮದಲ್ಲಿ ಕೊಡವ ಸಾಹಿತ್ಯಕ್ಕೆ, ಅದರ ಪ್ರಕಟಣೆÀಗೆ ಅವಿಶ್ರಾಂತವಾಗಿ ಶ್ರಮಿಸುತ್ತಿರುವ ಯು.ಎಂ.ಪೂವಯ್ಯ, ನಿವೃತ್ತ ಪ್ರಾಂಶುಪಾಲರಾದ ಕಲ್ಲುಮಾಡಂಡ ಸರಸ್ವತಿ, ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ಚೆಂಬಾAಡ ಶಿವಿ ಭೀಮಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷರಾದ ಬೊಳ್ಳಜಿರ ಅಯ್ಯಪ್ಪ, ಶ್ರೀ ಕೃಷ್ಣ ಕಂಪ್ಯೂಟರ್ಸ್ನ ಉಣ್ಣಿಕೃಷ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಾಹಿತ್ಯಾಭಿಮಾನಿಗಳಾದ ಮಡಿಕೇರಿ ತಾಲ್ಲೂಕು ಗಿರಿಜನ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಎ.ಮಿಟ್ಟು ರಂಜಿತ್ ಹಾಗೂ ಮಾಜಿ ಯೋಧ ಬೊಳ್ಳಿಯಂಡ ಗಣೇಶ್ ಉಪಸ್ಥಿತರಿದ್ದರು.










