
ಸೋಮವಾರಪೇಟೆ NEWS DESK ಫೆ.4 : ಸನಾತನ ಹಿಂದೂ ಧರ್ಮ-ಪರಂಪರೆ, ಸಂಸ್ಕೃತಿಯ ರಕ್ಷಣೆಗೆ ಒಗ್ಗಟ್ಟು ಅವಶ್ಯ. ಈ ನಿಟ್ಟಿನಲ್ಲಿ ಹಿಂದೂಗಳು ಸಂಘಟಿತರಾಗಬೇಕು. ಹಾಗಾದಾಗ ಹಲವಷ್ಟು ಸಮಸ್ಯೆಗಳು ತನ್ನಿಂತಾನೇ ಬಗೆಹರಿಯುತ್ತವೆ. ಮನೆ ಹಾಗೂ ಮನಗಳಲ್ಲಿ ಧರ್ಮ ಇರಬೇಕು. ಎಲ್ಲರೂ ಸಂಸ್ಕಾರವಂತರಾಗಿ ಬಾಳಬೇಕು ಎಂದು ಯಸಳೂರು ತೆಂಕಲಗೋಡು ಮಠಾಧೀಶರಾದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು. ಹಿಂದೂ ಸಂಗಮ ಆಯೋಜನಾ ಸಮಿತಿಯ ವತಿಯಿಂದ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ಮುಂಭಾಗ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವಿಶ್ವದಲ್ಲಿಯೇ ಭಾರತಕ್ಕೆ ವಿಶೇಷ ಸ್ಥಾನಮಾನವಿದೆ. ಪವಿತ್ರವಾದ ನಾಡಿನಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಕಣಕಣದಲ್ಲೂ ಶಕ್ತಿ, ಭಕ್ತಿ, ಧರ್ಮವನ್ನು ಈ ಮಣ್ಣು ಒಳಗೊಂಡಿದೆ. ಇತರ ಎಲ್ಲಾ ಧರ್ಮದವರಿಗೆ ಜೀವಿಸಲು ಸಾಕಷ್ಟು ರಾಷ್ಟ್ರಗಳಿವೆ. ಆದರೆ ಹಿಂದೂಗಳಿಗೆ ತಮ್ಮ ಧರ್ಮದ ಅನುಸಾರ ಜೀವನ ನಡೆಸಲು ಇರುವುದೊಂದೇ ಹಿಂದೂಸ್ಥಾನ. ಇದನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಮನೆ, ಆಸ್ತಿಗಳನ್ನು ಭದ್ರಗೊಳಿಸುವ ನಾವುಗಳು ತಾಯಿ ಭಾರತಾಂಭೆಯನ್ನೂ ರಕ್ಷಿಸಬೇಕು. ದೇಶ, ಧರ್ಮ ರಕ್ಷಣೆಯಾದರೆ ಮಾತ್ರ ನಾವುಗಳು ಬದುಕಲು ಸಾಧ್ಯ ಎಂಬುದನ್ನು ಮನಗಾಣಬೇಕು. ಈ ನಿಟ್ಟಿನಲ್ಲಿ ಆರ್.ಎಸ್.ಎಸ್., ಭಜರಂಗದಳ, ವಿಶ್ವಹಿಂದೂ ಪರಿಷತ್ ನಿರಂತರ ಧರ್ಮ ಜಾಗೃತಿ ಮೂಡಿಸುತ್ತಿದೆ. ವೈಯಕ್ತಿಕ ಬೆಳವಣಿಗೆಗೆ ಎಲ್ಲರೂ ಸಂಘಟನೆ ಕಟ್ಟುತ್ತಾರೆ. ಆದರೆ ರಾಷ್ಟ್ರದ ಹಿತಕ್ಕಾಗಿ ದುಡಿಯುವ ಏಕೈಕ ಸಂಘಟನೆಯೆಂದರೆ ಅದು ಆರ್.ಎಸ್.ಎಸ್. ಎಂದು ಹೇಳಿದರು. ಆರ್‌ಎಸ್‌ಎಸ್ ಸಂಘಟನೆಯು ಸೇವೆಯ ಮೂಲಕವೇ ಸಮಾಜಕ್ಕೆ ಅರ್ಪಣೆಯಾಗಿದೆ. ಸಮಾಜಕ್ಕೆ ತೊಂದರೆಯಾದಾಗ ತಕ್ಷಣ ಸ್ಪಂದಿಸುವುದು ಸಂಘ ಮಾತ್ರ ಎಂದ ಅವರು, ಎಲ್ಲರೂ ಆಚರಣೆಯಲ್ಲಿ ಧರ್ಮವನ್ನು ಅಳವಡಿಸಿಕೊಂಡರೆ ಮಾತ್ರ ಧರ್ಮ ಉಳಿಯುತ್ತದೆ. ಹಿರಿಯರು ಧರ್ಮ ಸಂರಕ್ಷಣೆ ಮಾಡಿ ನಮಗೆ ನೀಡಿದ್ದಾರೆ. ಸಂಸ್ಕಾರದ ಬೇರು ಆಳವಾಗಿ ನೆಲೆಯೂರಿದರೆ ಮಾತ್ರ ಸದೃಢ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದರು. ಯುವ ಜನಾಂಗ ದೇಶಪ್ರೇಮ, ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ರಾಷ್ಟçಕ್ಕಾಗಿ ಬದುಕುವ ಸಂಕಲ್ಪ ತೊಡಬೇಕು. ಪೋಷಕರು ತಮ್ಮ ಮಕ್ಕಳಿಗೆ ಕೇವಲ ಹಣ ಗಳಿಸುವ ಶಿಕ್ಷಣ ನೀಡಿದರಷ್ಟೇ ಸಾಲದು, ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದು ಕಿವಿಮಾತು ನುಡಿದರು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಬಾಷಣ ಮಾಡಿದ ಮಂಗಳೂರು ವಿಭಾಗ ಸಹ ವ್ಯವಸ್ಥಾ ಪ್ರಮುಖ್ ಸ್ವಾಮಿಪ್ರಸಾದ್ ಅವರು, ರಾಷ್ಟ್ರ, ಧರ್ಮ, ಸಂಸ್ಕೃತಿ ರಕ್ಷಣೆಯಲ್ಲಿ ನಮ್ಮ ಪಾತ್ರ ಏನು? ಎಂಬುದರ ಬಗ್ಗೆ ಜಾಗೃತಗೊಳ್ಳಲು ಹಿಂದೂ ಸಂಗಮ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ದೇಶದಲ್ಲಿ 80 ಸಾವಿರ ಕಡೆಗಳಲ್ಲಿ ಹಿಂದೂ ಸಂಗಮ ನಡೆಯುತ್ತಿದೆ ಎಂದರು. ಹಿಂದುತ್ವದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ತೆಗೆಯಬೇಕು. ಎಲ್ಲರನ್ನೂ ಒಟ್ಟು ಸೇರಿಸಿ ಹಿಂದೂ ರಾಷ್ಟ್ರ ಆಗಬೇಕು. ಯಾರನ್ನೂ ಇಲ್ಲಿಂದ ಓಡಿಸುವ ಅಗತ್ಯವಿಲ್ಲ. ಸಂಸ್ಕೃತಿಯ ಬಗ್ಗೆ ಶ್ರದ್ಧೆ, ಹೆಮ್ಮೆ ಇರಬೇಕು. ದೇಶದಲ್ಲಿ ಹುಟ್ಟಿರುವ ಎಲ್ಲರೂ ಹಿಂದೂಗಳು ಎಂಬುದು ಸಂಘದ ನಿಲುವು. ಈ ಮಣ್ಣಿಗೆ ಗೌರವ, ಶ್ರದ್ಧೆ ಹೊಂದಬೇಕು ಎಂದು ಹೇಳಿದರು. ಹಿಂದೂ ಕುಟುಂಬಗಳು ಮೌಲ್ಯವನ್ನು ಕಳೆದುಕೊಳ್ಳಬಾರದು. ಪರಿಸರ ಸಂರಕ್ಷಣೆ, ಸಾಮರಸ್ಯ, ನಾಗರಿಕ ಶಿಷ್ಟಾಚಾರ, ಸ್ವದೇಶೀ ಭಾವ ಜಾಗೃತವಿರಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು 100ರ ಸಂಭ್ರಮದಲ್ಲಿ ಸಮಾಜದ ಸುಧಾರಣೆಗೆ ಇನ್ನಷ್ಟು ವೇಗ ನೀಡಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯರಾದ ಕಾಳಪ್ಪ ವಹಿಸಿದ್ದರು. ವೇದಿಕೆಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಗೌರವಾಧ್ಯಕ್ಷ ಎಸ್.ಜಿ. ಮೇದಪ್ಪ, ಅಧ್ಯಕ್ಷ ಲಿಂಗರಾಜು ಇದ್ದರು. ಇದಕ್ಕೂ ಮುನ್ನ ತಲ್ತರೆ ಜಂಕ್ಷನ್‌ನಿAದ ಭಾರತ ಮಾತೆಯ ಭಾವಚಿತ್ರವನ್ನು ಅಳವಡಿಸಿದ್ದ ಅಲಂಕೃತ ವಾಹನದಲ್ಲಿ ಶೋಭಾಯಾತ್ರೆ ನಡೆಯಿತು. ಮಹಿಳೆಯರು ಪೂರ್ಣ ಕುಂಭದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಹಿಂದೂ ಸಮಾಜ ಬಾಂಧವರು ಕೇಸರಿ ಶಾಲು ಧರಿಸಿ ಭಾರತ್ ಮಾತಾಕೀ ಜೈ ಎಂಬ ಜಯಘೋಷದೊಂದಿಗೆ ಹೆಜ್ಜೆ ಹಾಕಿದರೆ, ಪುಟಾಣಿ ಮಕ್ಕಳು ಶಿವಾಜಿ, ಸುಭಾಷ್ ಚಂದ್ರಬೋಸ್, ಒನಕೆ ಓಬವ್ವ, ವಿವೇಕಾನಂದ, ಭಗತ್ ಸಿಂಗ್, ಕಿತ್ತೂರು ರಾಣಿ ಚನ್ನಮ್ಮ, ಶ್ರೀರಾಮ, ಕೃಷ್ಣ, ಆಂಜನೇಯನ ಛದ್ಮವೇಷ ಧರಿಸಿ ಸಂಭ್ರಮದಿಂದ ಸಾಗಿದರು.









