

ಮಡಿಕೇರಿ NEWS DESK ಫೆ.6 : ಪರಿಶಿಷ್ಟರು ಹಾಗೂ ಒಬಿಸಿ ವಿದ್ಯಾರ್ಥಿಗಳಲ್ಲಿ ಸಮಾನತೆಯನ್ನು ಪ್ರೋತ್ಸಾಹಿಸಲು ವಿಶ್ವ ವಿದ್ಯಾನಿಲಯ ಅನುದಾನ ಆಯೋಗ ರೂಪಿಸಿರುವ ನಿಯಮಾವಳಿಗಳನ್ನು ಶೀಘ್ರ ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದಿಂದ ಫೆ.9ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಎನ್.ಆರ್.ದೇವರಾಜು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯ ಅನುದಾನ ಆಯೋಗ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಮಾನತೆಯನ್ನು ಪ್ರೋತ್ಸಾಹಿಸಲು ರೂಪಿಸಿರುವ ನಿಯಮಾವಳಿಗೆ ಸುಪ್ರೀಂ ಕೋರ್ಟ್ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು, ರೋಹಿತ್ ವೇಮುಲ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಬೇಕು, ಜಾತಿ, ಧರ್ಮ ತಾರತಮ್ಯ ತಡೆಗಟ್ಟಲು ಯುಜಿಸಿ ನಿಯಮವನ್ನು ಕೇಂದ್ರ ಸರಕಾರ ಅನುಷ್ಠಾನಕ್ಕೆ ತರಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯ ವ್ಯಾಪಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು. ಫೆ.9ರಂದು ಬೆಳಿಗ್ಗೆ 11.30 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ನಡೆಸಿ ನಂತರ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಂಚಾಲಕ ಡಿ.ಆರ್.ಕೆಂಚೇಶ್ವರ್, ಜಿಲ್ಲಾ ಸಂಚಾಲಕ ಎಂ.ಡಿ.ಹರೀಶ್ ಕುಮಾರ್, ಮಹಿಳಾ ಘಟಕದ ಸಂಚಾಲಕಿ ಕೆ.ಕೆ.ಭಾಗ್ಯ ಹಾಗೂ ವಿದ್ಯಾರ್ಥಿ ಒಕ್ಕೂಟದ ಸಂಘಟನಾ ಸಂಚಾಲಕ ಟಿ.ಜಿ.ನೂತನ ಉಪಸ್ಥಿತರಿದ್ದರು.










