

ಮಡಿಕೇರಿ NEWS DESK ಫೆ.6 : ಜಿಲ್ಲಾ ಕೇಂದ್ರ ಮಡಿಕೇರಿ ಸಮೀಪದ ಮೇಕೇರಿ ಗ್ರಾಮದ ಶ್ರೀ ಗೌರಿಶಂಕರ ದೇವಾಲಯದಲ್ಲಿ ಮಹಾಶಿವರಾತ್ರಿ ಉತ್ಸವ ಫೆ.7ರಿಂದ 15ರವರೆಗೆ ಸಂಭ್ರಮದಿಂದ ನಡೆಯಲಿದೆಯೆಂದು ದೇವಾಸ್ಥಾನ ಸಮಿತಿ ಅಧ್ಯಕ್ಷ ಕುಯ್ಯಮುಡಿ ಕೆ.ಪೂರ್ಣಯ್ಯ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಹತ್ತು ದಿನಗಳ ಕಾಲ ಮಹಾಶಿವರಾತ್ರಿ ಉತ್ಸವವನ್ನು ಆಚರಿಸುವ ಏಕೈಕ ದೇವಾಲಯ ಶ್ರೀಗೌರಿಶಂಕರ ದೇವಾಲಯವಾಗಿದೆ. ಉತ್ಸವಕ್ಕೆ ಕಳೆದೊಂದು ತಿಂಗಳಿನಿಂದ ಗ್ರಾಮದ ಯುವ ಕಾರ್ಯಕರ್ತರು ಶ್ರಮಿಸುತ್ತಿರುವುದಾಗಿ ತಿಳಿಸಿದರು. ದೇವಸ್ಥಾನ ಸಮಿತಿಯ ಉಪಾಧ್ಯಕ್ಷರಾದ ಕೆ.ಆರ್.ಬೆಳ್ಳಿಯಪ್ಪ ಅವರು ಮಾತನಾಡಿ, ಆರಂಭಿಕ ದಿನವಾದ ಫೆ.7ರಂದು ಬೆಳಗ್ಗೆ 9.30ಕ್ಕೆ ದೇವಾಲಯದಲ್ಲಿ ಧ್ವಜಾರೋಹಣದ ಮೂಲಕ ಉತ್ಸವಕ್ಕೆ ಚಾಲನೆ ದೊರಕಲಿದೆ. ಮೊದಲ ದಿನದಿಂದ ಫೆ.14ರವರೆಗೆ ಪ್ರತಿನಿತ್ಯ ಸಂಜೆ 6.30ಕ್ಕೆ ಜಿಲ್ಲೆಯ ವಿವಿಧೆಡೆಗಳ ಭಜನಾ ತಂಡಗಳಿAದ ಭಜನಾ ಕಾರ್ಯಕ್ರಮ ಮತ್ತು ಅನ್ನದಾನವನ್ನು ಏರ್ಪಡಿಸಲಾಗಿದೆಯೆಂದು ಹೇಳಿದರು. ಹೊರೆ ಕಾಣಿಕೆಯ ಆಕರ್ಷಣೆ- ಶಿವರಾತ್ರಿಯ ದಿನವಾದ ಫೆ.15 ರಂದು ಬೆಳಗ್ಗೆ 9.30 ಗಂಟೆಗೆ ಮೇಕೇರಿ ಸುತ್ತಮುತ್ತಲ ಶಕ್ತಿನಗರ, ನವಗ್ರಾಮ, ಕಾವೇರಿ ಬಡಾವಣೆ, ಸುಭಾಷ್‌ನಗರ ಮತ್ತು ಮೇಕೇರಿ-ಬಿಳಿಗೇರಿ ಕೂಡು ರಸ್ತೆಯ ಬಳಿಯಿಂದ ಆಯಾ ವ್ಯಾಪ್ತಿಯ ನಿವಾಸಿಗಳು “ಹೊರೆ ಕಾಣಿಕೆ”ಯೊಂದಿಗೆ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಹೊರೆ ಕಾಣಿಕೆಯನ್ನು ದೇವರಿಗೆ ಅರ್ಪಿಸಲಿದ್ದಾರೆ. ಮೆರವಣಿಗೆಯಲ್ಲಿ ಧ್ವಜ, ಚಂಡೆಮೇಳ, ಭಜನಾ ಕುಣಿತ ತಂಡಗಳು ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು. ಅಂದು ಬೆಳಗ್ಗೆ 8 ಗಂಟೆಗೆ ಶ್ರೀ ಗೌರಿ ಶಂಕರ ದೇಗುಲದಲ್ಲಿ ಗಣಪತಿ ಹೋಮ, ಶ್ರೀ ಮೃತ್ಯುಂಜಯ ಹೋಮ, ರುದ್ರಾಭಿಷೇಕ, ಮಹಾಪೂಜೆಯ ಬಳಿಕ ಅನ್ನದಾನ ನಡೆಯಲಿದೆ. ರಾತ್ರಿ ದೇಗುಲದಲ್ಲಿ ರಂಗಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶಿವರಾತ್ರಿಯ ಜಾಗರಣೆ ಪ್ರಯುಕ್ತ “ಯಕ್ಷಗಾನ” ಪ್ರದರ್ಶನವನನ್ನು ಆಯೋಜಿಸಲಾಗಿದೆ. ಮರುದಿನ ಫೆ.16ರಂದು ಪೂಜಾ ಕಾರ್ಯ, ಅನ್ನದಾನದೊಂದಿಗೆ ಉತ್ಸವ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಟಿ.ಎನ್. ಲೋಕೇಶ್, ಖಜಾಂಚಿ ಸಿ.ಟಿ.ಈಶ್ವರ, ಪದಾಧಿಕಾರಿಗಳಾದ ಪಿ.ಎಂ. ದಾಮೋದರ ಹಾಗೂ ಬಿ.ಎನ್.ರತ್ನಾಕರ ರೈ ಉಪಸ್ಥಿತರಿದ್ದರು.










