ಮಡಿಕೇರಿ NEWS DESK ಫೆ.8 : ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಹಿಂದೂ ಸಮಾಜದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಜಾಗೃತಿ ಮೂಡಿಸುವ “ವಿರಾಟ ಹಿಂದೂ ಸಂಗಮ”ವು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಹಿಂದೂ ಬಾಂಧವರ ಭವ್ಯ ಮೆರವಣಿಗೆಯೊಂದಿಗೆ ನಡೆಯಿತು. ನಗರದ ನಾಲ್ಕು ವಿಭಾಗಗಳಿಂದ ಸ್ತಬ್ಧ ಚಿತ್ರ, ಭಾರತಾಂಬೆಯ ಪಟ ಚಿತ್ರ, ಚಂಡೆಮೇಳ, ಭಜನಾ ತಂಡಗಳೊಂದಿಗೆ ಮಧ್ಯಾಹ್ನ ಮೆರವಣಿಗೆಯ ಮೂಲಕ ಸಾಗಿಬಂದ ಹಿಂದೂ ಬಾಂಧವರು ಇಲ್ಲಿನ ಚೌಕಿಯಲ್ಲಿ ಸಮಾವೇಶಗೊಂಡು, ಶಿಸ್ತುಬದ್ಧವಾಗಿ ಗಾಂಧಿ ಮೈದಾನದತ್ತ ಸಾಗುವುದರೊಂದಿಗೆ ನಗರದ ರಾಜಬೀದಿ ಸಂಪೂರ್ಣ ಕೇಸರಿಮಯವಾಗಿ ಮಾರ್ಪಟ್ಟಿತು. ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಸಂರಕ್ಷಣೆೆ ಮತ್ತು ಪುನರುತ್ಥಾನದ ಉದಾತ್ತ ಚಿಂತನೆಗಳೊಂದಿಗೆ ಹಿಂದೂ ಸಮಾಜವನ್ನು ಪ್ರೇರೇಪಿಸುವ ಉದ್ದೇಶಗಳನ್ನು ಹೊಂದಿದ್ದ ಕಾರ್ಯಕ್ರಮದ ಭಾಗವಾಗಿ, ಇಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ನಗರದ ಕನ್ನಂಡಬಾಣೆ, ಪುಟಾಣಿ ನಗರವನ್ನು ಒಳಗೊಂಡ ಛತ್ರಪತಿ ವಿಭಾಗದ ಹಿಂದೂ ಬಾಂಧವರು ಜ.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಬಳಿಯ ಮೇಲಿನ ಗೌಡ ಸಮಾಜದಲ್ಲಿ ಸಮಾವೇಶಗೊಂಡರು. ಈ ಸಂದರ್ಭ ಆರ್‌ಎಸ್‌ಎಸ್ ಶಾರೀರಿಕ್ ಸಹ ಪ್ರಮುಖ್ ರ‍್ಯಾಲಿ ಕುಟ್ಟಪ್ಪ ಅವರು ಬೌದ್ಧಿಕ್ ನೀಡಿದರು. ಬಳಿಕ ಸ್ತಬ್ಧ ಚಿತ್ರ, ಕೇಸರಿ ಧ್ವಜಗಳೊಂದಿಗೆ, ವಿಭಾಗ ಪ್ರಮುಖರಾದ ಕೆ.ಎಸ್. ರಮೇಶ್ ಅವರ ನೇತೃತ್ವದಲ್ಲಿ ಮೆರವಣಿಗೆ ಚೌಕಿಯತ್ತ ಸಾಗಿತು. ಅಭಿಮನ್ಯು ವಿಭಾಗದ ಪ್ರಮುಖರಾದ ಬಿ.ಕೆ.ಜಗದೀಶ್ ಅವರ ನೇತೃತ್ವದಲ್ಲಿ ಕಾನ್ವೆಂಟ್ ಬಳಿಯ ಮೈದಾನದಲ್ಲಿ ಹಿಂದೂ ಬಾಂಧವರು ಸಮಾವೇಶಗೊಂಡರೆ, ಮಂಗಳೂರು ವಿಭಾಗೀಯ ಸಂಘಟನಾ ಸಂಚಾಲಕ ಯೋಗೇಶ್ ನಾಯಕ್ ಹಿಂದೂ ಬಾಂಧವರನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಕೇರಳದ ಚಂಡೆ ವಾದ್ಯ, ಶಕ್ತಿ ದೇವತೆಗಳ ದೇಗುಲಗಳಿಂದ ಶ್ರೀರಾಮ ಮತ್ತು ದೇವಿಯ ಮೂರು ಸ್ತಬ್ಧ ಚಿತ್ರಗಳೊಂದಿಗೆ ಮೆರವಣಿಗೆ ಸಾಗಿತು. ಸಮರ್ಥ್ ವಿಭಾಗದ ಪ್ರಮುಖರಾದ ಸಂತೋಷ್ ಅಣ್ವೇಕರ್ ಮುಂದಾಳತ್ವದಲ್ಲಿ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ಸ್ವಯಂ ಸೇವಕರಾದ ಧನಂಜಯ ಅಗೋಳಿಕಜೆ ಮಾತನಾಡಿದರು. ಬಳಿಕ ಮೂರು ಸ್ತಬ್ಧಚಿತ್ರ, ಮಕ್ಕಳ ಭಜನಾ ಕುಣಿತಗಳೊಂದಿಗೆ ಶೋಭಾಯಾತ್ರೆಗೆ ಚಾಲನೆ ದೊರಕಿತು. ಅಶ್ವಿನಿ ವಿಭಾಗದ ಪ್ರಮಖರಾದ ಚೇತನ್ ಮುಂದಾಳತ್ವದಲ್ಲಿ ಶಾಂತಿನಿಕೇತನದಲ್ಲಿ ನಡೆದ ಸಭೆಯಲ್ಲಿ ಆರ್‌ಎಸ್‌ಎಸ್ ಸರಸಂಘ ಚಾಲಕ ಮನು ಕಾವೇರಪ್ಪ ಮಾತನಾಡಿದರು. ಬಳಿಕ ಎರಡು ಮಂಟಪಗಳನ್ನು ಒಳಗೊಂಡಂತೆ, ಭಜನಾ ಕುಣಿತ, ಚಂಡೆÉ ವಾದ್ಯದೊಂದಿಗೆ ಶೋಭಾಯಾತ್ರೆ ಚೌಕಿಯತ್ತ ಸಾಗಿತು. ನಗರದ ನಾಲ್ಕುಕಡೆಗಳಿಂದ ಸಾಗಿ ಬಂದ ಹಿಂದೂ ಬಾಂಧವರ ಮೆರವಣಿಗೆ ಚೌಕಿಯಲ್ಲಿ ಸಂಜೆ ಸಂಗಮಗೊಂಡಿತು. ಬಳಿಕ ಎಲ್ಲಾ ವಿಭಾಗಗಳವರು ಒಂದಾಗಿ ನಗರದ ಖಾಸಗಿ ಬಸ್ ನಿಲ್ದಾಣ, ನಗರ ಠಾಣೆ, ನಗರಸಭೆಯನ್ನು ಹಾದು ಗಾಂಧಿ ಮೈದಾನಕ್ಕೆ ಶೋಭಾಯಾತ್ರೆಯ ಮೂಲಕ ತೆರಳಿದರು. ಮುಚ್ಚಲ್ಪಟ್ಟಿದ್ದ ಹಲ ಅಂಗಡಿ ಮಳಿಗೆ- ಹಿಂದೂ ಸಂಗಮದ ಹಿನ್ನೆಲೆಯಲ್ಲಿ ನಗರದ ಸಾಕಷ್ಟು ಹಿಂದೂ ಸಮಾಜ ಬಾಂಧವರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು. ಬಿಗಿ ಭದ್ರತೆ- ನಗರದಾದ್ಯಂತ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು ಮತ್ತು ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲಾಗಿತ್ತು.









