ಮಡಿಕೇರಿ NEWS DESK ಫೆ.8 : ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಕೋಡ್‌ಗಳನ್ನು ಹಿಂದಕ್ಕೆ ಪಡೆಯಬೇಕು, ವಿಬಿ ರಾಮ್ ಜಿ ಯೋಜನೆಯನ್ನು ರದ್ದುಗೊಳಿಸಿ, ಹಿಂದಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆಯನ್ನು ಆರಂಭಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು, ಸ್ವತಂತ್ರ ಒಕ್ಕೂಟಗಳಿಂದ ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ಫೆ.12 ರಂದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಪಿ.ಆರ್.ಭರತ್ ಮಾತನಾಡಿ, ಕೇಂದ್ರ ಕಾರ್ಮಿಕ ಸಂಘಟನೆಗಳಿಂದ ನೀಡಲಾಗಿರುವ ಕರೆಯ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 10.30 ಗಂಟೆಗೆ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿದೆ ಎಂದರು. ಕಾರ್ಮಿಕ ಸಂಘಟನೆಗಳ ಹೋರಾಟದ ಹಿನ್ನೆಲೆಯಲ್ಲಿ ಫೆ.12ರಂದು ಬಂದ್ ಎನ್ನುವ ತಪ್ಪು ಮಾಹಿತಿಯನ್ನು ಸಾರ್ವಜನಿಕವಾಗಿ ನೀಡಲಾಗುತ್ತಿದೆ. ಆದರೆ, ಅಂದು ಕಾರ್ಮಿಕರು ದಿನದ ಕೆಲಸದಿಂದ ಹೊರಗುಳಿದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ, ಹೋರಾಟದ ಹಿನ್ನೆಲೆಯಲ್ಲಿ ಬಂದ್ ಇರುವುದಿಲ್ಲವೆಂದು ಸ್ಪಷ್ಟಪಡಿಸಿದರು. ಹಲವು ದಶಕಗಳ ಹೋರಾಟಗಳಿಂದ ಕಾರ್ಮಿಕರಿಗೆ ನ್ಯಾಯ ಒದಗಿಸುವ 41 ಕಾನೂನುಗಳನ್ನು ದುಡಿಯುವ ವರ್ಗ ಪಡೆದುಕೊಂಡಿದೆ. ಇಂತಹ ಕಾನೂನುಗಳಲ್ಲಿ 21 ಕಾನೂನುಗಳನ್ನು ಇಂದಿನ ಕೇಂದ್ರ ಸರ್ಕಾರ ನಾಲ್ಕು ಲೇಬರ್ ಕೋಡ್‌ಗಳನ್ನಾಗಿ ಬದಲಿಸುವ ಮೂಲಕ, ಕಾರ್ಮಿಕ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಬಂಡವಾಳಶಾಹಿಗಳಿಗೆ ಅನುಕೂಲತೆಯನ್ನು ಕಲ್ಪಿಸಲು ಮುಂದಾಗಿದೆ. ಇಂತಹ ನಾಲ್ಕು ಕೋಡ್‌ಗಳನ್ನು ತಕ್ಷಣ ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ಒತ್ತಾಯಿಸಿದರು. ಕೇಂದ್ರ ಸರ್ಕಾರ ತಂದಿರುವ ಕಾರ್ಮಿಕ ಕಾಯ್ದೆಗಳ ನಾಲ್ಕು ಕೋಡ್‌ಗಳ ವಿರುದ್ಧ ಕಾರ್ಮಿಕ ಸಂಘಟನೆಗಳಿಂದ ದೇಶವ್ಯಾಪಿ ದೊಡ್ಡ ಮಟ್ಟದ ಹೋರಾಟಗಳು ನಡೆದಿದೆ. ಹೀಗಿದ್ದೂ ಕೇಂದ್ರ ಸರ್ವಾಧಿಕಾರಿ ಧೋರಣೆಯಿಂದ ಇವುಗಳನ್ನು ಜಾರಿ ಮಾಡಿದೆ. ಈ ಬದಲಾದ ಕಾರ್ಮಿಕ ಕಾನೂನುಗಳಿಂದ ಕಾರ್ಮಿಕರ ದುಡಿಯುವ ಅವಧಿಯನ್ನು 8 ಗಂಟೆಗಳಿಂದ 12 ಗಂಟೆಗಳಿಗೆ ಹೆಚ್ಚಿಸಲಾಗಿದೆ. ಇದರಲ್ಲಿ ಕನಿಷ್ಟ ವೇತನಕ್ಕೆ ಯಾವುದೇ ಮಿತಿಯನ್ನು ಅಳವಡಿಸಿಯೇ ಇಲ್ಲ. ಇಡೀ ಜಗತ್ತಿನಲ್ಲೆ ಕಾರ್ಮಿಕರಿಗೆ ದುಡಿಯುವ ಕನಿಷ್ಟ ವೇತನವನ್ನು ನಿಗದಿಪಡಿಸಲಾಗಿದ್ದರೆ, ಇಲ್ಲಿ ಅದನ್ನು ತೆಗೆಯುವ ಕೆಲಸವಾಗಿದೆಯೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಮುಖಂಡ ನೆರವಂಡ ಉಮೇಶ್, ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ, ಸಿಐಟಿಯು ಜಿಲ್ಲಾಧ್ಯಕ್ಷ ಎ.ಸಿ.ಸಾಬು ಮಾತನಾಡಿದರು. ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ನ ಕಾರ್ಮಿಕ ವಿಭಾಗದ ಗೌರವ ಕಾರ್ಯದರ್ಶಿ ಮಿನಾಜ್ ಪ್ರವೀಣ್ ಉಪಸ್ಥಿತರಿದ್ದರು.








