
ಮಡಿಕೇರಿ ಫೆ.17 NEWS DESK : ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ದುಬಾರೆ ಪ್ರಕೃತಿದತ್ತ ಸೌಂದರ್ಯದೊಂದಿಗೆ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಸಾಕಾನೆ ಶಿಬಿರವನ್ನು ಕಂಡು ಜನ ಬೆರಗಾಗುತ್ತಾರೆ. ಕಾವೇರಿ ನೀರಿಗೆ ಮನಸೋಲುತ್ತಾರೆ. ರ‍್ಯಾಫ್ಟಿಂಗ್‌ನೊಂದಿಗೆ ಜಲಕ್ರೀಡೆಯ ಅನುಭವವು ಹಿತ ನೀಡುತ್ತದೆ. ಆದರೆ, ನದಿ ದಾಟಿ, ಸಾಕಾನೆ ಶಿಬಿರ ಕಳೆದ ನಂತರದ ಅಲ್ಲಿಯೇ ತಲತಲಾಂತರಗಳಿಂದ ಬದುಕು ಕಟ್ಟಿಕೊಂಡಿರುವ ಬುಡಕಟ್ಟು ಜನರ ದಯನೀಯ ಸ್ಥಿತಿ ಯಾರಿಗೂ ಬೇಡವಾಗಿದೆ. ಸರಕಾರ, ಅಧಿಕಾರಿಗಳು ಹಾಗೂ ಆಡಳಿತದ ದಿವ್ಯನಿರ್ಲಕ್ಷ್ಯಕ್ಕೆ ಒಳಗಾಗಿರುವ ದುಬಾರೆ ಹಾಡಿಯ ನಿವಾಸಿಗಳ ಸಮಸ್ಯೆಯನ್ನು ಸಂಬಂಧಪಟ್ಟವರ ಗಮನ ಸೆಳೆಯುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕೊಡಗು ಪ್ರೆಸ್‍ಕ್ಲಬ್ ಹಾಗೂ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ದುಬಾರೆ ಹಾಡಿಯಲ್ಲಿ ಪತ್ರಕರ್ತರ ನಡೆ ಹಾಡಿ ಕಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಂಗನವಾಡಿಯಿದ್ದರು ಶಿಕ್ಷಕರಿಲ್ಲ, ದಾರಿಯಿದ್ದರೂ ಗುಣಮಟ್ಟದ ರಸ್ತೆಯಿಲ್ಲ, ಜಾಗವಿದ್ದರೂ ವಾಸಿಸಲು ಯೋಗ್ಯವಿಲ್ಲದ ಮನೆ ಇಲ್ಲದ ಜನರ ಗೋಳನ್ನು ಪತ್ರಕರ್ತರು ತಿಳಿದುಕೊಂಡರು. ಈ ನಿಟ್ಟಿನಲ್ಲಿ ಐಟಿಡಿಪಿ ಅಧಿಕಾರಿ ಹೊನ್ನೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಸನ್ನ ಕುಮಾರ್, ಚೆಸ್ಕಾಂ ಕಾರ್ಯಪಾಲಕ ಅಭಿಯಂತರ ಎಸ್.ಎಸ್. ಸತೀಶ್ ಅವರುಗಳನ್ನು ಸ್ಥಳಕ್ಕೆ ಕರೆಸಿಕೊಂಡು ನಿವಾಸಿಗಳ ಸಮಸ್ಯೆಗಳನ್ನು ತಿಳಿಸುವ ಪ್ರಯತ್ನವನ್ನು ಮಾಡಲಾಯಿತು. : ಸಮಸ್ಯೆಗಳನ್ನು ತೆರೆದಿಟ್ಟ ಆದಿವಾಸಿಗಳು : ತಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆದಿವಾಸಿಗಳು ಎಳೆಎಳೆಯಾಗಿ ಅಧಿಕಾರಿಗಳ ಎದುರು ತೆರೆದಿಟ್ಟರು. ಸಮರ್ಪಕವಾಗಿ ವಿದ್ಯುತ್ ಸಂಪರ್ಕವಿಲ್ಲ, ರಸ್ತೆ ಸಂಪೂರ್ಣ ದುಸ್ಥಿತಿಯಲ್ಲಿ ಕೂಡಿದೆ. ಚಿಕಿತ್ಸೆಗೆ ಕರೆದೊಯ್ಯುವಾಗ ಮೃತಪಟ್ಟಿರುವ ಉದಾಹರಣೆಗಳು ಕೂಡ ಇವೆ. ಜೋಪಾಡಿಯಲ್ಲಿ ಶೋಚನೀಯವಾಗಿ ಹಲವು ನಿವಾಸಿಗಳು ಬದುಕುತ್ತಿದ್ದಾರೆ. ಕೆಲವು ಮನೆಗಳ ಮೇಲೆ ಮರ ಬಿದ್ದು ನಷ್ಟವೂ ಉಂಟಾಗಿದೆ ಎಂದು ನಿವಾಸಿಗಳು ಗೋಳು ಹೇಳಿಕೊಂಡರು. ಸ್ಥಳೀಯ ನಿವಾಸಿ ನಾಗು ಮಾತನಾಡಿ, ಇಲ್ಲಿನ ನಿವಾಸಿಗಳಿಗೆ ಪಡಿತರ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಮ್ಮ ಗೋಳು ಕೇಳುವವರು ಇಲ್ಲದಾಗಿದೆ. ಅಲ್ಲದೆ ಪಟ್ಟಣಕ್ಕೆ ತೆರಳಲು ಸುತ್ತಿ ಬಳಸಿ ತೆರಳಬೇಕಾದ ಹಿನ್ನೆಲೆ ದುಬಾರೆ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣವಾಗಬೇಕೆಂದು ಒತ್ತಾಯಿಸಿದರು.
ಹಾಡಿಯಲ್ಲಿರುವ ಅಂಗನವಾಡಿಯಲ್ಲಿ ಹಲವು ಸಮಯದಿಂದ ಶಿಕ್ಷಕರಿಲ್ಲದ ಪರಿಣಾಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ತಕ್ಷಣ ಶಿಕ್ಷಕರನ್ನು ನೇಮಿಸಬೇಕೆಂದು ಸ್ಥಳೀಯರು ಒಕ್ಕೊರಲ ಆಗ್ರಹ ವ್ಯಕ್ತಪಡಿಸಿದರು. ಸ್ಥಳೀಯ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಎಲಿಜಬೇತ್ ಮಾತನಾಡಿ, ಅಂಗನವಾಡಿ ಮಕ್ಕಳಿಗೆ ಶಾಲೆಯಲ್ಲಿ ಬೋಧಿಸಲಾಗುತ್ತಿದೆ. ಶಿಕ್ಷಕರಿಲ್ಲದ ಪರಿಣಾಮ ಶಾಲಾ ಅಕ್ಷರ ದಾಸೋಹ ಸಿಬ್ಬಂದಿಯನ್ನು ಮಕ್ಕಳನ್ನು ನೋಡಿಕೊಳ್ಳಲು ನಿಯೋಜಿಸಲಾಗಿದೆ. ಶಿಕ್ಷಕರ ನೇಮಕಕ್ಕೆ ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ. ಪ್ರಸಕ್ತ ಸಾಲಿನಲ್ಲಿ 17 ವಿದ್ಯಾರ್ಥಿಗಳು ದಾಖಲಾಗಿದ್ದು, 1 ರಿಂದ 5ನೇ ತರಗತಿಯ ತನಕ ಪಾಠ ಪ್ರವಚನ ನಡೆಯುತ್ತಿದೆ. ಶಾಲೆಗೆ ಸೂಕ್ತ ಭದ್ರತೆ ಇಲ್ಲದ ಕಾರಣ ಕಾಡುದನಗಳು ಆವರಣಕ್ಕೆ ಬರುತ್ತವೆ. ಸಗಣಿ ತೆಗೆಯುವ ಕೆಲಸವನ್ನು ಮಕ್ಕಳು ಹಾಗೂ ನಾವು ಮಾಡಬೇಕಾಗಿದೆ. ಸದ್ಯಕ್ಕೆ ತಂತಿ ಬೇಲಿ ಇದೆ. ಅದನ್ನು ಹಾರಿ ದನಗಳು ಬರುತ್ತಿವೆ. ಗ್ರಾ.ಪಂ. ಗಮನಕ್ಕೆ ತಂದರೂ ಅನುದಾನ ನೀಡುತ್ತಿಲ್ಲ. ಶಾಲೆಗೆ ದಾನಿಗಳು ಕಂಪ್ಯೂಟರ್ ನೀಡಿದ್ದಾರೆ. ಸೂಕ್ತ ವಿದ್ಯುತ್ ವ್ಯವಸ್ಥೆ ಇಲ್ಲದೆ ಇದನ್ನು ಉಪಯೋಗಿಸಲಾಗುತ್ತಿದೆ. ಇಲ್ಲಿನ ಮಕ್ಕಳಿಗೆ ಕಲಿಕೆಯ ಆಸಕ್ತಿಯಿದೆ. ಅಲ್ಲದೆ ಇಲ್ಲಿಯೇ ವಿದ್ಯಾವಂತರು ಇರುವ ಕಾರಣ ಅಂಗನವಾಡಿಗೆ ಶಿಕ್ಷಕರನ್ನು ಆದ್ಯತೆ ಮೇರೆಗೆ ಇಲ್ಲಿಂದಲೇ ನೇಮಿಸಬೇಕೆಂದರು.
ಹಾಡಿಯಲ್ಲಿರುವ ಬಹುತೇಕ ಮನೆಗಳು ದುಸ್ಥಿತಿಯಲ್ಲಿವೆ. ಕುಟುಂಬ ದೊಡ್ಡದಾಗುತ್ತ ಹೋದಂತೆ ಸಣ್ಣ ಜೋಪಾಡಿಯಲ್ಲಿ ಬದುಕು ನಡೆಸಬೇಕಾದ ಅನಿವಾರ್ಯತೆ ತಲೆದೋರಿದೆ. ಸರಕಾರದ ಸೌಲಭ್ಯ ದೊರೆಯುತ್ತಿಲ್ಲ. ಹಲವು ಮನೆಗಳ ಗೋಡೆ ಬೀಳುವ ಭಯವಿದೆ. ಗೋಡೆ ಬಿದ್ದು ಒಬ್ಬ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದ ಸ್ಥಳೀಯರು, ಸೊಸೈಟಿಗೆ ಮಾಲ್ದಾರೆಗೆ ಹೋಗಬೇಕಾಗಿದ್ದು, ದುಬಾರೆ ಹಾಡಿಯಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಬೇಕು. ರಸ್ತೆ ಸರಿಯಾಗಬೇಕು ಎಂದು ಒತ್ತಾಯಿಸಿದರು. ಆದಿವಾಸಿ ಮುಖಂಡ, ಜಿ.ಪಂ. ಮಾಜಿ ಸದಸ್ಯ ಚಂದ್ರು ಮಾತನಾಡಿ, ಜೇನು ಕುರುಬ ಸಮುದಾಯವನ್ನು ಸರಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ಯೋಗ್ಯ ಮನೆ ಇಲ್ಲ, ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಎಲ್ಲರಿಗೂ ಮೂಲಭೂತ ಸೌಲಭ್ಯ ಸಿಗಬೇಕು. ನಮ್ಮ ಹಕ್ಕು ಪಡೆಯಲು ಭಿಕ್ಷೆ ಬೇಡುವಂತಾಗಿದೆ. ಶಾಲೆಗೂ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಅಧಿಕಾರಿಗಳಿಗೆ ದುಬಾರೆ ಹಾಡಿಯಿದೆ ಎಂಬುದೆ ತಿಳಿದಿಲ್ಲ. ಜನಪ್ರತಿನಿಧಿಗಳಂತೂ ತಿರುಗಿ ನೋಡುತ್ತಿಲ್ಲ. ಚುನಾವಣಾ ಸಮಯದಲ್ಲಿ ಮಾತ್ರ ಮತ ಕೇಳಲು ಬರುತ್ತಾರೆ. ಅನಂತರ ನಮ್ಮನ್ನು ಮರೆಯುತ್ತಾರೆ. ಹಾಡಿಗೆ ಸೂಕ್ತ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಬೇಕು. ದುಬಾರೆಯಲ್ಲಿ ಮುಂದೆ ಗ್ರಾಮ ಸಭೆ ನಡೆಸಬೇಕು ಎಂದು ಆಗ್ರಹಿಸಿದರು. :: ಹಾಡಿ ಪ್ರದಕ್ಷಿಣೆ :: ಹಾಡಿ ನಿವಾಸಿಗಳೊಂದಿಗೆ ಅಧಿಕಾರಿಗಳು ಹಾಗೂ ಪತ್ರಕರ್ತರು ತೆರೆದ ವಾಹನದಲ್ಲಿ ಹಾಡಿಯನ್ನು ಪ್ರದಕ್ಷಿಣೆ ಹಾಕಿ ಸಮಸ್ಯೆಯನ್ನು ತಿಳಿದುಕೊಳ್ಳುವ ಪ್ರಯತ್ನ ನಡೆಸಿದರು. ಮನೆ, ಶಾಲೆ, ಅಂಗನವಾಡಿ ಬಳಿ ತೆರಳಿ ಜನರ ಸಮಸ್ಯೆಯನ್ನು ಕೇಳಲಾಯಿತು. ಈ ಸಂದರ್ಭ ಸಾರ್ವಜನಿಕರು ತಮ್ಮ ನೋವುಗಳನ್ನು ಹೇಳಿಕೊಂಡರು. :: ಅಧಿಕಾರಿಗಳಿಂದ ಕ್ರಮದ ಭರವಸೆ :: ಜನರ ಸಮಸ್ಯೆಗಳನ್ನು ಕಣ್ಣಾರೆ ಕಂಡು, ಅವಹಾಲು ಆಲಿಸಿದ ಅಧಿಕಾರಿಗಳು ಸಮಸ್ಯೆಯ ಬಗೆಹರಿಸುವ ಭರವಸೆಯನ್ನು ಈ ಸಂದರ್ಭ ನೀಡಿದರು. ಐಟಿಡಿಪಿ ಅಧಿಕಾರಿ ಹೊನ್ನೇಗೌಡ ಮಾತನಾಡಿ, ದುಬಾರೆ ಹಾಡಿಗೆ ಸೂಕ್ತ ಸೌಲಭ್ಯ ಒದಗಿಸಲು ಇಲಾಖೆ ಕಟಿಬದ್ಧವಾಗಿದೆ. ಕುಡಿಯುವ ನೀರು, ವಿದ್ಯುತ್ ಸಂಪರ್ಕವನ್ನು ಈಗಾಗಲೇ ಒದಗಿಸಲಾಗಿದೆ. ರಸ್ತೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 42 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಸರ್ವೆ ನಂತರ ಸಮುದಾಯ ಹಕ್ಕು ನೀಡುತ್ತೇವೆ. ಆದಿವಾಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ನಂಜರಾಯಪಟ್ಟಣದಲ್ಲಿ ವಸತಿ ಶಾಲೆ ವ್ಯವಸ್ಥೆ ಕಲ್ಪಿಸಿದ್ದೇವೆ. ಇದನ್ನು ಬಳಸಿಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಂತೆ ಕಿವಿಮಾತನಾಡಿದರು.
ಮನೆ ನಿರ್ಮಾಣಕ್ಕೆ ರೂ. 4.50 ಲಕ್ಷ ಹಣ ನೀಡಲು ಸ್ಥಳೀಯ ಪಂಚಾಯಿತಿಯಲ್ಲಿ ಅವಕಾಶವಿದ್ದು, ಆನ್‍ಲೈನ್‍ನಲ್ಲಿ ದಾಖಲಾತಿಗಳನ್ನು ಅಪ್‍ಲೋಡ್ ಮಾಡಿ ಯೋಜನೆಯ ಲಾಭ ಪಡೆದಕೊಳ್ಳಬಹುದಾಗಿದೆ. ನೇರವಾಗಿ ಫಲಾನುಭವಿಗಳ ಖಾತೆ ಹಣ ಸಂದಾಯವಾಗಲಿದ್ದು, ಅದನ್ನು ಬಳಸಿಕೊಂಡು ಮನೆ ನಿರ್ಮಿಸಬಹುದಾಗಿದೆ. ದುಬಾರೆ ಹಾಡಿಯಲ್ಲಿ ಭಾಗಶಃ ಸಾಕಾನೆ ಶಿಬಿರ, ಮೀಸಲು ಅರಣ್ಯವಿರುವ ಕಾರಣದಿಂದ ಕೆಲ ಗೊಂದಲಗಳಿವೆ. ಇಲ್ಲಿನ ನಿವಾಸಿಗಳು ಶಿಬಿರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆದ್ಯತೆ ಮೇರೆಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ತೂಗು ಸೇತುವೆ ನಿರ್ಮಾಣಕ್ಕೂ ಪ್ರಸ್ತಾವನೆ ಇದೆ ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಸನ್ನ ಕುಮಾರ್ ಮಾತನಾಡಿ, ಅಂಗನವಾಡಿಗೆ ಶಿಕ್ಷಕರನ್ನು ತಕ್ಷಣ ನೇಮಿಸಲಾಗುವುದು. ವಾರದ 6 ದಿನವೂ ಕಾರ್ಯನಿರ್ವಹಿಸಲು ಕ್ರಮವಹಿಸಲಾಗುವುದು. ಸ್ಥಳೀಯ ವಿದ್ಯಾವಂತರಿಗೆ ಶಿಕ್ಷಕರನ್ನಾಗಿ ನೇಮಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಚೆಸ್ಕಾಂ ಅಧಿಕಾರಿ ಸತೀಶ್ ಮಾತನಾಡಿ, ಈಗಾಗಲೇ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. 6-7 ಮನೆಯವರು ಅಗತ್ಯ ದಾಖಲಾತಿ ನೀಡಿಲ್ಲದ ಕಾರಣದಿಂದ ಆರ್‍ಆರ್ ನಂಬರ್ ನೀಡಿಲ್ಲ. ದಾಖಲಾತಿ ನೀಡಿದ ತಕ್ಷಣ ಸಂಪರ್ಕ ನೀಡಲಾಗುವುದು ಎಂದು ಹೇಳಿದರು. ಇದೇ ಸಂದರ್ಭ ಸ್ಥಳಕ್ಕಾಗಮಿಸಿದ ಜಿ.ಪಂ. ಮಾಜಿ ಅಧ್ಯಕ್ಷ, ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ಆದಿವಾಸಿಗಳಿಗೆ ಸರಕಾರದಿಂದ ಸಿಗಬೇಕಾದ ಎಲ್ಲಾ ಸವಲತ್ತುಗಳು ಸಕಾಲದಲ್ಲಿ ದೊರೆಯಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು. ಮೂಲಭೂತ ಸೌಲಭ್ಯಗಳನ್ನು ತಕ್ಷಣ ಕಲ್ಪಿಸಿ ಸ್ವತಂತ್ರ್ಯ ಹಾಗೂ ಸ್ವಾವಲಂಬಿಯಾಗಿ ಬದುಕುವಂತೆ ಮಾಡಬೇಕು. ಸಮಾಜದ ಮುಖ್ಯವಾಹಿನಿಗೆ ಕರೆ ತರುವ ನಿಟ್ಟಿನಲ್ಲಿ ಪತ್ರಕರ್ತರು ಮಾಡಿರುವ ಕಾರ್ಯವನ್ನು ಶ್ಲಾಘಿಸಿದರು. ಈ ಸಂದರ್ಭ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕುಶಾಲನಗರ ತಾಲೂಕು ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್, ಖಜಾಂಚಿ ಸುನಿಲ್ ಪೊನ್ನೇಟಿ ಸೇರಿದಂತೆ ನಿರ್ದೇಶಕರು, ಸದಸ್ಯರು ಹಾಜರಿದ್ದರು.









