
ಸೋಮವಾರಪೇಟೆ ಫೆ.18 NEWS DESK : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಂದಾಜು 1 ಕೋಟಿ ರೂ.ಗಳ ವೆಚ್ಚದ ಸುಸಜ್ಜಿತ ಒಳಾಂಗಣ ಬಾಸ್ಕೆಟ್‍ಬಾಲ್ ಕೋರ್ಟ್ ನಿರ್ಮಾಣಕ್ಕೆ ಶಾಸಕ ಡಾ.ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಬಾಸ್ಕೆಟ್‍ಬಾಲ್ ಆಟಗಾರರ ಬಹುದಿನದ ಕನಸ್ಸನ್ನು ನನಸ್ಸು ಮಾಡುವ ಉದ್ದೇಶದಿಂದ ಕ್ರಮ ಅನುದಾನ ಕಲ್ಪಿಸಲಾಗುವುದು. ಇಲ್ಲಿಯವರೆಗೆ ಆಟಗಾರರೇ ಸ್ವಂತ ಖರ್ಚಿನಲ್ಲಿ ಕೋರ್ಟ್ ಮಾಡಿಕೊಂಡಿದ್ದರು. ಜಿಲ್ಲೆಯಲ್ಲಿ ಮಳೆ ಜಾಸ್ತಿಯಿರುವುದರಿಂದ ಒಳಾಂಗಣ ಕ್ರೀಡಾಂಗಣ ಮಾಡಲೇಬೇಕಿದೆ. ಮೊದಲ ಹಂತದಲ್ಲಿ ಸಿಂಥೆಟಿಕ್ ಕೋರ್ಟ್ ಮತ್ತು ವಿದ್ಯುತ್ ದೀಪ ಅಳವಡಿಸಲಾಗುತ್ತದೆ. ನಂತರ ಅವಶ್ಯಕವಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ವಿಶೇಷವಾಗಿ ಯುವಕರರು ಬಾಸ್ಕೆಟ್‍ಬಾಲ್ ಕ್ರೀಡೆಯತ್ತ ಒಲುವು ಮೂಡಿಸಬೇಕು. ಕೊಡಗಿನ ಜನರಿಗೂ ಕ್ರೀಡೆಗೂ ಅವಿನಾಭಾವ ಸಂಬಂಧವಿದೆ. ಹಾಕಿ, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಬ್ಯಾಡ್ಮಿಂಟನ್, ಬಾಸ್ಕೆಟ್‍ಬಾಲ್ ಇನ್ನಿತರ ಆಟಗಳನ್ನು ಆಡಿ ಕಲಿತವರಿದ್ದಾರೆ. ಅಂತಹ ಕ್ರೀಡಾಪಟುಗಳಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂಬುದೇ ನಮ್ಮ ಆಶಯವೂ ಆಗಿದೆ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯತ್ತ ಒಲವು ಮೂಡಿಸಿಕೊಳ್ಳಬೇಕು. ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ 4 ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಸದ್ಯದಲ್ಲೇ ಪ್ರಾರಂಭವಾಗಲಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕ್ರೀಡಾ ತರಬೇತಿ ಪಡೆದುಕೊಳ್ಳಲು ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು. ಹಾಕಿ ಸಿಂಥೆಟಿಕ್ ಟರ್ಫ್‍ನ ಮೈದಾನದಲ್ಲಿ ನೀರಿನ ಕೊರತೆಯಿದೆ. ವಿದ್ಯುತ್ ಸಮಸ್ಯೆಯೂ ಕಾಡುತ್ತಿದೆ. ಸಮಸ್ಯೆ ಬಗೆಹರಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಿಯಿ ಅವರಿಗೆ ಶಾಸಕರು ಸೂಚಿಸಿದರು. ಈ ಸಂದರ್ಭ ಬಾಸ್ಕೆಟ್‍ಬಾಲ್ ಆಟಗಾರರಾದ ಬಾಲಕೃಷ್ಣ ನಂಬಿಯಾರ್, ಪ್ರಮುಖರಾದ ಬಿ.ಸಿ.ವೆಂಕಟೇಶ್, ಪಿ.ಕೆ.ರವಿ, ಡಿ.ಯು.ಕಿರಣ್, ವಿನಯ್, ಕೆ.ಎ.ಖಾದರ್, ಚೇತನ್ ಮತ್ತಿತರು ಇದ್ದರು.









