
ಮಡಿಕೇರಿ NEWS DESK ಫೆ.20 : 2026-27ನೇ ಸಾಲಿನ ಬಜೆಟ್‌ನಲ್ಲಿ ಮಡಿಕೇರಿ ನಗರದ ಸಮಗ್ರ ಅಭಿವೃದ್ಧಿಗೆ ಹಾಗೂ ಏಕಗವಾಕ್ಷಿ ಪ್ರವಾಸಿ ಸೇವಾ ಕೇಂದ್ರ ಸ್ಥಾಪನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಶಾಸಕ ಡಾ.ಮಂತರ್ ಗೌಡ ಅವರಲ್ಲಿ ಮನವಿ ಮಾಡಿಕೊಂಡಿದೆ. ಈ ಕುರಿತು ಶಾಸಕರಿಗೆ ಪತ್ರ ಬರೆದಿರುವ ಚೇಂಬರ್ ಆಫ್ ಕಾಮರ್ಸ್ನ ನಗರಾಧ್ಯಕ್ಷ ಸಂತೋಷ್ ಅಣ್ವೇಕರ್ ಮಡಿಕೇರಿ ನಗರಕ್ಕೆ ಭೇಟಿ ನೀಡುವ ಪ್ರವಾಸಿಗರ ಹಿತದೃಷ್ಟಿಯಿಂದ ಏಕಗವಾಕ್ಷಿ ಪ್ರವಾಸಿ ಸೇವಾ ಕೇಂದ್ರ ಸ್ಥಾಪನೆಗೆ ಮತ್ತು ನಗರದ ಸಮಗ್ರ ಅಭಿವೃದ್ಧಿಗಾಗಿ ಮುಖ್ಯ ಯೋಜನೆಗಳಿಗೆ ಮುಂಬರುವ ರಾಜ್ಯ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕೆಂದು ಕೋರಿದ್ದಾರೆ.
*ಪ್ರಮುಖ ಬೇಡಿಕೆಗಳು* ಪ್ರವಾಸಿಗರಿಗೆ ಒಂದೇ ಸೂರಿನಡಿ ಮಾಹಿತಿ ಕೇಂದ್ರ, ಪ್ರವಾಸಿ ತಾಣಗಳ ಟಿಕೆಟ್ ಬುಕ್ಕಿಂಗ್ ಮತ್ತು ರೈಲ್ವೆ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಒದಗಿಸುವ ಸುಸಜ್ಜಿತವಾದ ಏಕಗವಾಕ್ಷಿ ಪ್ರವಾಸಿ ಸೇವಾ ಕೇಂದ್ರದ ಕಚೇರಿಯನ್ನು ಸ್ಥಾಪಿಸಬೇಕು. ನಗರದ ಭದ್ರತೆ ಮತ್ತು ಸುಗಮ ಸಂಚಾರಕ್ಕಾಗಿ ಪ್ರಮುಖ ಜಂಕ್ಷನ್‌ಗಳಲ್ಲಿ ಎಐ (ಕೃತಕ ಬುದ್ಧಿಮತ್ತೆ) ಚಾಲಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ನಗರದ ಮುಖ್ಯ ರಸ್ತೆಗಳಲ್ಲಿ ಹಳೆಯ ಬೀದಿ ದೀಪಗಳನ್ನು ಬದಲಿಸಿ, ಪರಿಸರ ಸ್ನೇಹಿ ಮತ್ತು ಹೆಚ್ಚು ಬೆಳಕು ನೀಡುವ ಎಲ್‌ಇಡಿ ದೀಪಗಳನ್ನು ಅಳವಡಿಸಬೇಕು. ಮಾರುಕಟ್ಟೆ ಪ್ರದೇಶದಲ್ಲಿ ತಾಯಂದಿರಿಗಾಗಿ ಹಾಲುಣಿಸುವ ಕೇಂದ್ರಗಳು (ಪಿಂಕ್ ರೂಮ್ಸ್) ಮತ್ತು ಹಿರಿಯ ನಾಗರಿಕರಿಗೆ ವಿಶ್ರಾಂತಿ ಪಡೆಯಲು ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಬೇಕು. ಸಂಚಾರದಟ್ಟಣೆ ನಿಯಂತ್ರಿಸಲು ರಸ್ತೆ ಬದಿಯಲ್ಲಿ ವೈಜ್ಞಾನಿಕ ಪಾರ್ಕಿಂಗ್ ಮಾರ್ಗಗಳನ್ನು ಗುರುತಿಸಬೇಕು ಹಾಗೂ ಪುಟ್‌ಪಾತ್‌ಗಳನ್ನು ಶೃಂಗಾರಗೊಳಿಸಿ ಅಭಿವೃದ್ಧಿಪಡಿಸಬೇಕು. ಸುಸಜ್ಜಿತವಾದ ಬೃಹತ್ ಪಾರ್ಕಿಂಗ್ ಸಂಕೀರ್ಣವನ್ನು ನಿರ್ಮಿಸಿ ‘ಪೇ ಐಂಡ್ ಪಾರ್ಕಿಂಗ್’ ಯೋಜನೆ ರೂಪಿಸಬೇಕು. ಜನ ವಸತಿ ಇಲ್ಲದ ಸರಕಾರಿ ಜಾಗದಲ್ಲಿ ಸುಸಜ್ಜಿತ ಪ್ರಾಣಿ ಆಶ್ರಯ ಕೇಂದ್ರ ನಿರ್ಮಿಸುವ ಮೂಲಕ ಬೀದಿ ನಾಯಿಗಳ ಹಾವಳಿ ತಡೆಗಟ್ಟಬೇಕು.
ನಗರಸಭೆ ವತಿಯಿಂದ ವ್ಯಾಪಾರಸ್ಥರಿಗೆ ನೀಡುವ ಟ್ರೇಡ್ ಲೈಸೆನ್ಸ್ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಪ್ರಸ್ತುತ ಇರುವ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಣಗೊಳಿಸಬೇಕು. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ಈ ಪ್ರಸ್ತಾವನೆಗಳನ್ನು ಬಜೆಟ್ ನಲ್ಲಿ ಪರಿಗಣಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಸಂತೋಷ್ ಅಣ್ವೇಕರ್ ಶಾಸಕರಲ್ಲಿ ಮನವಿ ಮಾಡಿದ್ದಾರೆ.








