
ಬಾಳೆಲೆ NEWS DESK ಫೆ.23 : ಜೀರ್ಣೋದ್ಧಾರಗೊಳ್ಳುತ್ತಿರುವ ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ಗ್ರಾಮದ ದೇವನೂರು ಪ್ರಸಿದ್ಧ ಶ್ರೀ ಮಹದೇವ ದೇವಸ್ಥಾನಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ .ಪೊನ್ನಣ್ಣ ರವರು ಭೇಟಿ ನೀಡಿ ಪರಿಶೀಲಿಸಿದರು. ವಿಶೇಷ ಪೂಜೆ ಸಲ್ಲಿಸಿದ ಶಾಸಕರು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಇದೇ ಸಂದರ್ಭ ಶಾಸಕರ ಅನುದಾನ ರೂ.7.5 ಲಕ್ಷಗಳಲ್ಲಿ ನಿರ್ಮಿಸಿರುವ ದೇವಸ್ಥಾನದ ರಸ್ತೆಯನ್ನು ಅವರು ಉದ್ಘಾಟಿಸಿದರು. ದೇವಸ್ಥಾನದ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಕಾರ್ಯಗಳಿಗೆ ಮುಜುರಾಯಿ ಇಲಾಖೆಯಿಂದ ರೂ.10 ಲಕ್ಷ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು. ವಲಯ ಅಧ್ಯಕ್ಷ ಕೋದಂಡ ಸಂಪನ್ ಸೋಮಣ್ಣ, ಸುಬ್ಬಯ್ಯ, ದೇವಸ್ಥಾನ ಸಮಿತಿಯ ಪ್ರಮುಖರು, ಪಂಚಾಯಿತಿ ಮಾಜಿ ಸದಸ್ಯ ವಿನು ಉತ್ತಪ್ಪ, ಪೊನ್ನಪ್ಪಸಂತೆ ವಲಯ ಅಧ್ಯಕ್ಷ ಚೆಟ್ಟಿಮಾಡ ರೋಬಿನ್ ಬೋಪಣ್ಣ, ದೇವಯ್ಯ, ಅನಿಶ್ ಬೋಪಣ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.










