
ಮಡಿಕೇರಿ NEWS DESK ಫೆ.23 : ಕೇರಳ-ಕರ್ನಾಟಕ ರಾಜ್ಯ ಚುಟುಕು ಸಾಹಿತ್ಯ ಸಮ್ಮೇಳನವು ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನದ ಸಭಾಂಗಣದಲ್ಲಿ ಅದ್ಧೂರಿಯಿಂದ ಜರುಗಿತು. ಚುಟುಕು ಯುಗಾಚಾರ್ಯ ಡಾ| ಎಂ.ಜಿ.ಆರ್. ಅರಸ್ ವೇದಿಕೆಯಲ್ಲಿ ಈ ಸಂದರ್ಭ ಕವಿಗೋಷ್ಠಿ, ಯುವಕವಿಗೋಷ್ಠಿ, ವಿಚಾರಗೋಷ್ಠಿ, “ಕವಿ ಕಾವ್ಯವಿಭೂಷಣ” “ಕವಿ ಕಾವ್ಯ ಕಂಠೀರವ” ಪ್ರಶಸ್ತಿ ಪ್ರದಾನ ನಡೆಯಿತು. ಈ ಸಂದರ್ಭ ಕೊಡಗಿನ ಚುಟುಕು ಬ್ರಹ್ಮ ಖ್ಯಾತಿಯ ಹಾ. ತಿ. ಜಯಪ್ರಕಾಶ್, ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ, ಆಜೂರ ರಾಜ್ಯ ಪ್ರಶಸ್ತಿ ವಿಜೇತೆ , ಸಾಹಿತಿ ಪೂಜಾರೀರ ಕೃಪಾ ದೇವರಾಜ್, ಕೊಡವ ಅಕಾಡೆಮಿ ರಾಜ್ಯ ಪ್ರಶಸ್ತಿ, ಗ್ಲೋಬಲ್ ಅಚೀವರ್ಸ್ ಅವಾರ್ಡ್ ವಿಜೇತೆ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ , ಸಾಹಿತಿ ಅರಸಿನಮಕ್ಕಿಯ ರೇಣುಕಾ ಸುಧೀರ್ ಇನ್ನಿತರರು ರಾಷ್ಟ್ರೀಯ ಕವಿಕಾವ್ಯ ವಿಭೂಷಣ ಪ್ರಶಸ್ತಿ ಸ್ವೀಕಾರ ಮಾಡಿದರು. ಸಮ್ಮೇಳನಕ್ಕೆ ಮೊದಲು ಸರ್ವಾಧ್ಯಕ್ಷ ನಾಡೋಜ ಡಾ. ಕೃಷ್ಣಕುಮಾರ್ ಕೂಡ್ಲು , ಕನ್ನಡ ಭವನದ ಸ್ಥಾಪಕರೂ, ಕೇರಳ ರಾಜ್ಯ-ಚುಟುಕು ಸಾಹಿತ್ಯ ಪರಿಷತ್ತು ಸಂಸ್ಥಾಪಕರೂ ಆದ ಡಾ| ವಾಮನ್ ರಾವ್ ಬೇಕಲ್ ಅವರುಗಳನ್ನು ಅದ್ಧೂರಿಯಿಂದ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ವೇದಿಕೆ ಸಮಾರಂಭ ಹಾಗೂ ಸಾಂಸ್ಕೃತಿಕ ಕಲಾ ವೈಭವ, ಯಕ್ಷಗಾನ ಬಯಲಾಟ , 101 ಮಂದಿಯಿಂದ ಪ್ರಾತಃಕಾಲ ಭಜನೆ ಇತ್ಯಾದಿ ಸನಾತನ ಸಂಸ್ಕೃತಿಯೊಂದಿಗೆ ಪೂರ್ಣದಿನ ಸಾಂಸ್ಕೃತಿಕ ವೈಭವ ನೆಲೆಮಾಡಿತ್ತು. ಶ್ರೀ ಶಂಕರಾಚಾರ್ಯ ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಶ್ರೀ ಮಹೇಶ ಸ್ವಾಮಿಗಳು ಹಾಗೂ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.








