
ನಾಪೋಕ್ಲು ಫೆ.23 NEWS DESK : ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಗ್ಗಾಲು ಗ್ರಾಮದ ವರ್ಷಿಣಿ ಪೂಜಾರಿ ಭಾಗವಹಿಸಿ, ಜಿಲ್ಲೆಗೆ ಕೀರ್ತಿ ತಂದ ಹಿನ್ನೆಲೆಯಲ್ಲಿ ಕಾಂತೂರು ಮೂರ್ನಾಡು ಗ್ರಾಮ ಪಂಚಾಯತಿ ವತಿಯಿಂದ ಸನ್ಮಾನಿಸಲಾಯಿತು. ಪಂಚಾಯತಿ ಮಾಜಿ ಅಧ್ಯಕ್ಷರಾದ ಕುಶನ್ ರೈ ಮಾತನಾಡಿ, ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗಿಯಾಗುವುದು ಅಷ್ಟು ಸಾಧಾರಣ ವಿಷಯವಲ್ಲ ಅದಕ್ಕೆ ತುಂಬಾ ಶ್ರಮ ಪಡಬೇಕು. ಎಲ್ಲರಿಗೆ ಈ ಸಾಧನೆ ಮಾಡಲು ಅವಕಾಶ ಸಿಗುವುದಿಲ್ಲ. ಬೆರಳಣಿಕೆಯಷ್ಟು ಜನ ಮಾತ್ರ ಇಂತಹ ಸಾಧನೆಯನ್ನು ಮಾಡಬಹುದು. ಅದರಲ್ಲಿ ನಮ್ಮ ಊರಿನವರೇ ಇದ್ದಾರೆ ಅದು ತುಂಬಾ ಹೆಮ್ಮೆಯ ವಿಷಯ ಎಂದರು. ಪಿಡಿಓ ಚಂದ್ರಮೌಳಿ ಮಾತನಾಡಿ, ಸಾಧನೆಗೆ ಕಠಿಣ ಪರಿಶ್ರಮ ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದನ್ನೆಲ್ಲ ಗೆದ್ದು ಮುಂದೆ ಬಂದರೆ ಇಂಥ ಸಾಧನೆ ಮಾಡಲು ಸಾಧ್ಯ ಎಂದರು. ಅಲ್ಲದೆ ಒಂದು ಹೆಣ್ಣು ಮಗಳು ಸಾಧನೆ ಮಾಡಿದ್ದು ಎಲ್ಲರಿಗೆ ಹೆಮ್ಮೆಯ ವಿಷಯ ಎಂದರು. ವೈಯಕ್ತಿಕವಾಗಿ ಕಿರು ಕಾಣಿಕೆ ನೀಡಿ ಗೌರವಿಸಿದರು. ಪುದಿಯೋಕ್ಕಡ ರಮೇಶ್ ಮಾತನಾಡಿ, ನಮ್ಮ ಊರಿನ ಹೆಣ್ಣು ಮಗಳು ಇಂತಹ ಸಾಧನೆ ಮಾಡಿರುವುದು ಗಮನಾರ್ಹ. ನಮಗೆ ತುಂಬಾ ಹೆಮ್ಮೆಯ ವಿಷಯ ಎಂದರು. ತಂದೆ ತಾಯಿಯ ತ್ಯಾಗ ಎಲ್ಲವನ್ನು ಸ್ಮರಿಸಿ ಅಭಿನಂದಿಸಿದರು. ವರ್ಷಿಣಿ ಮೂರ್ನಾಡು ಗ್ರಾಮದ ಬಾಲು ಮತ್ತು ರೇಖಾ ದಂಪತಿಗಳ ಪ್ರಥಮ ಪುತ್ರಿಯಾಗಿದ್ದು, ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ 2ನೆ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ. ಇವರು 5 ಕರ್ನಾಟಕ ನಾವೆಲ್ ಯೂನಿಟ್ ಎನ್ ಸಿ ಯಲ್ಲಿ ಸೀನಿಯರ್ ವಿಂಗ್ ಆಲ್ ಇಂಡಿಯಾ ಕರ್ತವ್ಯ ಪಥ್ ನಲ್ಲಿ ಆಯ್ಕೆ ಆಗಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.









