
ಸೋಮವಾರಪೇಟೆ NEWS DESK ಮಾ.3 : ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಮಾಜಿ ಸಿ ಆರ್ ಪಿ ಎಫ್ ನ ಯೋಧರೊಬ್ಬರೂ ಸಾವನಪ್ಪಿರುವ ಘಟನೆ ಸಮೀಪದ ತೋಳುರುಶೆಟ್ಟಳ್ಳಿಯಲ್ಲಿ ನಡೆದಿದೆ. ಹೆಚ್.ಎ.ವೆಂಕಟೇಶ್(64) ಮೃತ ದುರ್ದೈವಿ. ಮನೆಯಲ್ಲೇ ತೋಟ ಬಳಕೆಯ ಯಂತ್ರಗಳಿಗೆಂದು ತಂದಿಟ್ಟಿದ್ದ ಪೆಟ್ರೋಲ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದೆ. ವೆಂಕಟೇಶ್ ಅವರು ಒಂದು ಕಾಲನ್ನು ಕಳೆದುಕೊಂಡಿದ್ದರಿಂದ ತಕ್ಷಣ ಸ್ಥಳದಿಂದ ಹೊರಬರಲು ಸಾಧ್ಯವಾಗದೆ ಬೆಂಕಿಗೆ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬೆಂಕಿಯ ತೀವ್ರತೆಗೆ ಮನೆಯ ಒಂದು ಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಸ್ಥಳೀಯರು ಮನೆಯ ಮೇಲಿನಿಂದ ದಟ್ಟ ಹೊಗೆ ಕಾಣಿಸಿಕೊಂಡ ಹಿನ್ನೆಲೆ ಧಾವಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆಗಲೇ ವೆಂಕಟೇಶ್ ಅವರು ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ. ಸ್ಥಳಕ್ಕೆ ಸೋಮವಾರಪೇಟೆ ವೃತ್ತ ನಿರೀಕ್ಷಕ ಮುದ್ದು ಮಾದೇವ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಹಾಗೂ ಇರ್ವರೂ ಪುತ್ರಿಯರನ್ನು ಅಗಲಿದ್ದಾರೆ.









