
ಮಡಿಕೇರಿ ಮಾ.7 NEWS DESK : ಆಧುನಿಕ ಸಮಾಜದಲ್ಲಿ ಮಹಿಳೆಯರಿಗೆ ಅತ್ಯಂತ ಪ್ರಮುಖವಾದ ಸ್ಥಾನವಿದೆ. ಮಹಿಳೆಯರು ಸಮಾಜದ ಮುನ್ನೆಲೆಗೆ ಬಂದಲ್ಲಿ ಆ ಸಮಾಜದ ಏಳಿಗೆ ಶತಸಿದ್ಧ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಹೇಳಿದರು. ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಗ್ರಾಮದ ಸ್ಥಳೀಯ ಮಹಿಳಾ ಸಂಘಟನೆ ವತಿಯಿಂದ ಶ್ರೀಮಂಗಲ ಕೊಡವ ಸಮಾಜದಲ್ಲಿ ನಡೆದ ಆಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಮಹಿಳಾ ಸಬಲೀಕರಣವು ಸರ್ಕಾರದ ಪ್ರಮುಖ ಆಶಯವಾಗಿದ್ದು, ಮಹಿಳೆಯರ ದಿನಾಚರಣೆ ಕೇವಲ ಒಂದು ಕಾರ್ಯಕ್ರಮವಾಗಿರದೆ ಇದು ಆಚರಣೆಗೆ ಬಂದಲ್ಲಿ ಮಾತ್ರ ಸಮಾಜಕ್ಕೆ ಒಳಿತಾಗಲಿದೆ ಎಂದು ಹೇಳಿದರು. ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ ಅವರು ಮಾತನಾಡಿ ಆಧುನಿಕ ಜಗತ್ತಿನಲ್ಲಿ ಪುರುಷರಿಗೆ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಹೆಸರು ಮಾಡುತ್ತಿದ್ದಾರೆ. ಸೇನೆಯಲ್ಲಿ ಕ್ರೀಡೆಯಲ್ಲಿ ಸಾರ್ವಜನಿಕ ಬದುಕಿನಲ್ಲಿ ಹಾಗೂ ಸಮಾಜದ ಎಲ್ಲಾ ರೀತಿಯ ಚಟುವಟಿಕೆಗಳಲ್ಲೂ ಮಹಿಳೆಯರು ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿರುವುದು ಮಹಿಳಾ ಸಬಲೀಕರಣಕ್ಕೆ ಸಾಕ್ಷಿಯಾಗಿದೆ. ಇದೇ ರೀತಿ ಮಹಿಳೆಯರು, ಸಮಾಜದ ಒಳಿತಿಗಾಗಿ ಸಂಘಟಿತರಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀಮಂಗಲ ಕೊಡವ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪೆಮ್ಮಂಡ ಸಬಿತಾ ಕುಶಾಲಪ್ಪ, ಉಪಾಧ್ಯಕೆ ಕಾಳಿಮಾಡ ಸೀಮಾ ಪ್ರಶಾಂತ್, ಕಾರ್ಯದರ್ಶಿ ಚಟ್ಟಂಡ ಲತಾ ಚರ್ಮಣ, ಖಜಾಂಚಿ ಮಚ್ಚಮಾಡ ಶ್ವೇತಾ ಉದಯ ಸೇರಿದಂತೆ ಪದಾಧಿಕಾರಿಗಳಾದ ಚೋನಿರ ಪವಿ ರತ್ತು, ಕೋಟ್ರಮಾಡ ಶೈಮಾ ರೋಷನ್, ಶೀತಲ್ ಮಾದಪ್ಪ, ಶೃತಿ ನಿತಿನ್, ಚೇಂದಂಡ ತಾನ್ಸಿ ಚೇತನ್,ಮೋಟಯ್ಯ, ಪೆಮ್ಮಂಡ ರಾಜ, ಕಾಳಿಮಾಡ ಪ್ರಶಾಂತ್, ಪಾಲ್ವಿನ್, ವಿಶು, ಸುದಿ, ಅಲೆಮಾಡ ಸೋಮಣ್ಣ ಹಾಜರಿದ್ದರು.









