
ಮಡಿಕೇರಿ NEWS DESK ಮಾ.29 : ಕೂಡಿಗೆಯ ಸೈನಿಕ ಶಾಲೆ ಕೊಡಗು ತನ್ನ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಅಂತರ ನಿಲಯ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಅತ್ಯಂತ ಸಂಭ್ರಮ ಸಡಗರಗಳಿಂದ, ಎಲ್ಲಾ ನಿಲಯಗಳ ವಿದ್ಯಾರ್ಥಿಗಳು ಅತ್ಯುತ್ಸಾಹದ ಪಾಲ್ಗೊಲ್ಳುವಿಕೆಯ ಮೂಲಕ ನಡೆಯಿತು. ಈ ಸಾಂಸ್ಕೃತಿಕ ಹಬ್ಬದಲ್ಲಿ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಮೂಹ ಗೀತೆ ಗಾಯನ ಸ್ಪರ್ಧೆ “ಭವಿಷ್ಯ ನಮ್ಮದು” ಎನ್ನುವ ಶೀರ್ಷಿಕೆಯಡಿ, ಕಿರುನಾಟಕ “ಡಿಜಿಟಲ್ ಕನ್ನಡಿ: ತಂತ್ರಜ್ಞಾನ ಮತ್ತು ನೈತಿಕತೆ” ಎನ್ನುವ ವಿಷಯದಡಿ, ಜಾನಪದ ನೃತ್ಯ ಸ್ಪರ್ಧೆ ಸ್ಥಳೀಯ ಸಂಪ್ರದಾಯಗಳು ಮತ್ತು ಪುರಾಣ ಕಥೆಗಳಿಗೆ ಸಂಬಧಿಸಿದAತೆ ಹಾಗೂ ಸಮೂಹ ನೃತ್ಯ “ಫ್ರೀ-ಸ್ಟೈಲ್ ಸಿನಿಮಾಟಿಕ್” ಶೈಲಿಯಲ್ಲಿ ಅತ್ಯಾಕರ್ಷಕವಾಗಿ ಮೂಡಿ ಬಂದಿತು. ತೀವ್ರ ಪೈಪೋಟಿಯಿಂದ ಕುಡಿದ್ದ ಸ್ಪರ್ಧೆಗಳಲ್ಲಿ ಕಾರ್ಯಪ್ಪ ನಿಲಯವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಭಾವಪೂರ್ಣ ಬೀಳ್ಕೊಡುಗೆ-ಇದೇ ಸಂದರ್ಭ ಶಾಲೆಯ 13ನೇ ಬ್ಯಾಚ್‌ನ 12ನೇ ತರಗತಿಯ ಕೆಡೆಟ್‌ಗಳಿಗೆ ಭಾವಪೂರ್ಣ ಬೀಳ್ಕೊಡುಗೆ ನೀಡಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಉಪ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಕೆಡೆಟ್‌ಗಳ ಎಂಟು ವರ್ಷಗಳ ಶಿಸ್ತುಬದ್ಧ ಜೀವನ, ಕಠಿಣ ತರಬೇತಿ ಮತ್ತು ಶೈಕ್ಷಣಿಕ ಸಾಧನೆಗಳನ್ನು ಮೆಲುಕು ಹಾಕಿ, ಈ ಅನುಭವಗಳು ಅವರನ್ನು ಭವಿಷ್ಯದ ಸವಾಲುಗಳನ್ನು ಎದುರಿಸಲು ಸಮರ್ಥ ವ್ಯಕ್ತಿಗಳನ್ನಾಗಿ ರೂಪಿಸಲಿವೆಯೆಂದು ತಿಳಿಸಿದರು. ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಅವರು ನಿರ್ಗಮಿತ ಕೆಡೆಟ್‌ಗಳಿಗೆ ಶಾಲೆಯ ನೆನಪಿನ ಕಾಣಿಕೆಗಳನ್ನು ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪ್ರಾಮಾಣಿಕತೆ, ಧೈರ್ಯ, ನಿಷ್ಠೆ ಮತ್ತು ನಾಯಕತ್ವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಶಿಸ್ತು ಮತ್ತು ನಡತೆಯ ಮಹತ್ವವನ್ನು ಒತ್ತಿಹೇಳಿದ ಅವರು, ದೈಹಿಕ ಸದೃಢತೆಯನ್ನು ಕಾಯ್ದುಕೊಳ್ಳಲು ದುರಭ್ಯಾಸಗಳಿಂದ ದೂರವಿರುವಂತೆ ಕಿವಿಮಾತು ಹೇಳಿದರು. ಸ್ಪರ್ಧಾ ವಿಜೇತರಿಗೆ ಇದೇ ಸಂದರ್ಭ ಪ್ರಶಸ್ತಿಗಳನ್ನು ವಿತರಿಸಲಾಯಿತು. ಸಮಾರಂಭದಲ್ಲಿ ಸುಬೇದಾರ್ ಮೇಜರ್ (ಗೌರವಾನ್ವಿತ ಲೆಫ್ಟಿನೆಂಟ್) ರಾಮ್ ಲಾಲ್, ರೀತಾ ಕುಮಾರಿ, ದಿವ್ಯಾ ಸಿಂಗ್, ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್, ಹಿರಿಯ ಶಿಕ್ಷಕರಾದ ವಿಭಿನ್ ಕುಮಾರ್, ಡಾ.ಸಿ.ಎಸ್.ಅನುಪಮಾ, ವಿದುಷಿ ಏಂಜೆಲ್ ರಶ್ಮಿ ಡಿಸೋಜಾ, ಋತು ಎನ್.ರಾಜ್ ಹಾಗೂ ಶಾಲೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಎನ್‌ಸಿಸಿ ಸಿಬ್ಬಂದಿ ಹಾಗೂ ಕೆಡೆಟ್‌ಗಳು ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿ ನಾಯಕ ಹೃದಯ್ ವಂದಿಸಿದರು.









