
ಕುಶಾಲನಗರ ಏ.18 NEWS DESK : ಕುಶಾಲನಗರ ಶ್ರೀ ಯೋಗಿ ನಾರೇಯಣ ಬಲಿಜ ಸಂಘದ ವತಿಯಿಂದ ಕೈವಾರ ತಾತಯ್ಯ ಅವರ 300 ನೇ ಜಯಂತಿ ಆಚರಿಸಲಾಯಿತು. ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಬಲಿಜ ಸಂಘದ ಅಧ್ಯಕ್ಷ ಎನ್.ಪಿ.ಮುನಿಕೃಷ್ಣಪ್ಪ ಉದ್ಘಾಟಿಸಿ ಮಾತನಾಡಿದರು. ಕೈವಾರ ತಾತಯ್ಯ ಅವರ ಕುರಿತು ಪ್ರವಚನ ಮಾಡಿದ ಕೈವಾರ ಕ್ಷೇತ್ರದ ಮಂಕಾಲ ಶ್ರೀ ಹರಿಶರ್ಮ ಅವರು, ಪರಹಿತಕ್ಕಾಗಿ ಜೀವಿಸಿದ ಬುದ್ದ, ಬಸವ, ಕೈವಾರ ತಾತಯ್ಯ, ಮಹಾವೀರ ಮೊದಲಾದ ಮಹಾತ್ಮರನ್ನು ಪೀಳಿಗೆಯಿಂದ ಪೀಳಿಗೆಗೆ ಜನಸಮುದಾಯ ಅರಿಯಬೇಕು. ಅವರು ಸಮಾಜಕ್ಕೆ ನೀಡಿದ ಸಂದೇಶಗಳನ್ನು ಪಾಲಿಸಬೇಕು. ಅಹಿಂಸೆಯ ಜೀವನ ಕಟ್ಟಬೇಕು ಎಂಬುದು ಪ್ರಾತಸ್ಮರಣೀಯರ ಆಶಯವಾಗಿತ್ತು ಎಂದು ಶ್ರೀಹರಿಶರ್ಮಾ ಹೇಳಿದರು. ಕುಶಾಲನಗರ ತಾಲ್ಲೂಕು ಬಲಿಜ ಸಮಾಜದ ಅಧ್ಯಕ್ಷ ಆರ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಲಿಜ ಸಮಾಜದ ಮಂದಿ ಒಗ್ಗಟ್ಟಾಗಬೇಕಾಗಿದೆ ಎಂದರು. ಬಲಿಜ ಸಂಘದ ಗೌರವ ಅಧ್ಯಕ್ಷ ಆರ್.ಬಾಬು ಮಾತನಾಡಿ, ತಾಲ್ಲೂಕಿನಲ್ಲಿ ಹೆಚ್ಚಿನ ಬಲಿಜ ಕುಟುಂಬಗಳಿವೆ. ಕುಶಾಲನಗರದಲ್ಲಿ ಪ್ರತ್ಯೇಕ ನಿವೇಶನ ಖರೀದಿಸಿ ಭವನ ನಿರ್ಮಿಸುವ ಗುರಿ ಗೊಂದಲಾಗಿದೆ ಎಂದರು. ಕೊಡಗು ಜಿಲ್ಲಾ ಸಮಾಜದ ಅಧ್ಯಕ್ಷ ಗಣೇಶ ನಾಯ್ಡು, ಅಮರನಾರಾಯಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ.ಸತೀಶ್ ಇದ್ದರು. ಬಲಿಜ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.









