ಮಡಿಕೇರಿ, NEWS DESK ಅ. 9: ಕೊಡವರ ಸಾಂಪ್ರದಾಯಿಕ ತೋಕ್‌ಗೆ (ಬಂದೂಕು) ಸಾಂವಿಧಾನಿಕ ಹಾಗೂ ಶಾಸನಬದ್ಧ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಸಲಾಯಿತು.
ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ನಡೆದ ಸತ್ಯಾಗ್ರಹದ ಮೂಲಕ, ಕೊಡವರ ತೋಕ್ ಆಚರಣೆಯನ್ನು ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಧಾರ್ಮಿಕ ಆಚರಣೆಯಾಗಿ ಗುರುತಿಸಿ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಲಾಯಿತು. ಈ ಸಂಬಂಧ ಕೊಡಗು ಜಿಲ್ಲಾಡಳಿತದ ಮೂಲಕ ಕೇಂದ್ರ ಗೃಹ ಸಚಿವರಿಗೆ ಜ್ಞಾಪನ ಪತ್ರ ಸಲ್ಲಿಸಲಾಯಿತು. ಸಹಾಯಕ ಆಯುಕ್ತ ನಿರಂಜನ್ ಅವರು ಮನವಿ ಪತ್ರ ಸ್ವೀಕರಿಸಿದರು.
ಕೊಡವ ಸಮುದಾಯದಲ್ಲಿ ತೋಕ್ ಕೇವಲ ಆಯುಧವಲ್ಲ; ಅದು ಜನನದಿಂದ ಮರಣದವರೆಗಿನ ಜೀವನಚಕ್ರದ ವಿಧಿವಿಧಾನಗಳು, ನಾಮಕರಣ, ವಿವಾಹ, ಕೈಲ್‌ಪೋಳ್ದ್, ಪುತ್ತರಿ ಹಾಗೂ ಪೂರ್ವಜರ ಆರಾಧನೆಯೊಂದಿಗೆ ಬೆಸೆದುಕೊಂಡಿರುವ ಪವಿತ್ರ ಸಂಪ್ರದಾಯವಾಗಿದೆ ಎಂದು ನಾಚಪ್ಪ ತಿಳಿಸಿದರು. ಐನ್‌ಮನೆಗಳ ಕನ್ನಿಕೊಂಬರೆ, ಮಂದ್‌ಗಳು ಹಾಗೂ ವಿವಿಧ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳಲ್ಲಿ ಬಂದೂಕಿಗೆ ವಿಶೇಷ ಸ್ಥಾನವಿದೆ. ಹೀಗಾಗಿ ಅದನ್ನು ಸಾಮಾನ್ಯ ಆಯುಧವೆಂದು ಪರಿಗಣಿಸದೆ, ಕೊಡವರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಗುರುತಿಸಬೇಕು ಎಂದು ಅವರು ಆಗ್ರಹಿಸಿದರು.
ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ–1959ರ ಸೆಕ್ಷನ್ 41ರ ಅಡಿಯಲ್ಲಿ ಕೊಡವರಿಗೆ ನೀಡಲಾಗಿರುವ ಬಂದೂಕು ವಿನಾಯಿತಿಯನ್ನು 2029ರ ಅಕ್ಟೋಬರ್ 31ರವರೆಗೆ ವಿಸ್ತರಿಸಿರುವುದನ್ನು ಉಲ್ಲೇಖಿಸಿದ ಅವರು, ಈ ವಿನಾಯಿತಿಯನ್ನು ಕೇವಲ ಸವಲತ್ತಾಗಿ ಪರಿಗಣಿಸದೆ, ಸಮುದಾಯದ ಐತಿಹಾಸಿಕ ಪರಂಪರೆ ಮತ್ತು ಧಾರ್ಮಿಕ ಸಂಸ್ಕಾರದ ಹಿನ್ನೆಲೆಯಲ್ಲಿ ಗುರುತಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕೊಡವರ ಭಾಷೆ, ಸಂಸ್ಕೃತಿ ಹಾಗೂ ಜನಾಂಗೀಯ ಗುರುತಿನ ರಕ್ಷಣೆಗೆ ಸಂಬಂಧಿಸಿದ ಹಲವು ಬೇಡಿಕೆಗಳನ್ನು ಮಂಡಿಸಲಾಯಿತು. ಕೊಡವರನ್ನು ಬುಡಕಟ್ಟು ಸಮುದಾಯಗಳ ಪಟ್ಟಿಗೆ ಸೇರಿಸುವ ಪ್ರಸ್ತಾವನೆಯನ್ನು ಪರಿಗಣಿಸುವುದು, ಸಂವಿಧಾನದ ಐದನೇ ಅನುಸೂಚಿಯಡಿ ಕೊಡವಲ್ಯಾಂಡ್‌ಗೆ ರಕ್ಷಣೆ ಒದಗಿಸುವುದು, 2027ರ ಜನಗಣತಿಯಲ್ಲಿ ಪ್ರತ್ಯೇಕ ಜನಾಂಗೀಯ ಗುರುತಿನ ಕೋಡ್ ನೀಡುವುದು ಹಾಗೂ ಕೊಡವಲ್ಯಾಂಡ್ ಸ್ವಾಯತ್ತ ಆಡಳಿತ ಮಂಡಳಿ ರಚನೆಯ ಸಾಧ್ಯತೆಯನ್ನು ಪರಿಶೀಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕೋರಲಾಯಿತು.
ಕೊಡವ ತೋಕ್ ಆಚರಣೆಗೆ ಸಾಂವಿಧಾನಿಕ ರಕ್ಷಣೆ, ಕೊಡವ ಭಾಷೆ ಮತ್ತು ಜನಾಂಗೀಯ ಗುರುತಿಗೆ ಮಾನ್ಯತೆ, ಪ್ರತ್ಯೇಕ ಜನಗಣತಿ ಕೋಡ್ ಹಾಗೂ ಸ್ವಾಯತ್ತ ಆಡಳಿತದ ಬೇಡಿಕೆಗಳನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಸಿಎನ್‌ಸಿ ಮುಖಂಡರು ಒತ್ತಾಯಿಸಿದರು.
ಸತ್ಯಾಗ್ರಹದಲ್ಲಿ ಮಂದಪಂಡ ಗೊಂಬೆ ಸೀತವ್ವ, ಕಲಿಯಂಡ ಮೀನಾ ಕಾರ್ಯಪ್ಪ, ಅರೆಯಡ ಸವಿತಾ ಗಿರೀಶ್, ಚೋಳಪಂಡ ಜ್ಯೋತಿ ನಾಣಯ್ಯ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ. ಪಾರ್ವತಿ, ಪಟ್ಟಮಾಡ ಲಲಿತಾ ಗಣಪತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

















