
ಮಡಿಕೇರಿ ಏ.23 NEWS DESK : ಪ್ರತಿಭೆ ಮತ್ತು ಕ್ರೀಡಾ ಚೈತನ್ಯ ಹೊಮ್ಮಿಸಿದ ಸಮಾಗಮ ಬೇಸಿಗೆ ಶಿಬಿರ ವಿವಿಧ ಕಲಾ ಪ್ರದರ್ಶನದೊಂದಿಗೆ ಸಮಾಪನಗೊಂಡಿತು. ನಗರದ ಕೊಡಗು ವಿದ್ಯಾಲಯದಲ್ಲಿ 22 ದಿನಗಳಿಂದ ನಡೆದ ಸಮಾಗಮ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭಕ್ಕೆ ವಿಜೃಂಭಣೆಯ ತೆರೆ ಬಿದ್ದಿತು. ಸಮಾಗಮ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಪ್ರಸಿದ್ಧ ಪಿಕಲ್‌ಬಾಲ್ ತರಬೇತುದಾರರು ಹಾಗೂ ಕರ್ನಾಟಕ ರಾಜ್ಯ ಪಿಕಲ್‌ಬಾಲ್ ಸಂಘದ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಮತ್ತು ಏಷ್ಯಾ ಪಿಕಲ್‌ಬಾಲ್ ಮಹಾಸಂಘದ ಉಪಾಧ್ಯಕ್ಷ ರಜತ್ ಕಂಕರ್ ಎಂ. ಆರ್ ಆಗಮಿಸಿದ್ದರು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಜತ್ ಕಂಕರ್ , ಪೋಷಕರು ಮಕ್ಕಳೊಂದಿಗೆ ಸಮಯ ಕಳೆಯಬೇಕು ಹಾಗೂ ಅವರೊಂದಿಗೆ ಆಟವಾಡಬೇಕು ಎಂದು ಸಲಹೆ ನೀಡಿದರು. ಎಂಟು ವರ್ಷ ಮೇಲ್ಪಟ್ಟವರು ಪಿಕಲ್‌ಬಾಲ್ ಕ್ರೀಡೆಗಳಲ್ಲಿ ಭಾಗವಹಿಸಬಹುದು ಎಂದೂ ರಜತ್ ಕಂಕರ್ ಅವರು ಮಾಹಿತಿ ನೀಡಿದರು. ಈ ಕ್ರೀಡೆಯಲ್ಲಿ ಹಲವಾರು ವಿಭಾಗಗಳಿದ್ದು ಎಲ್ಲರಿಗೂ ಅವಕಾಶಗಳಿವೆ ಎಂದರು.ಮಕ್ಕಳು ವರ್ಷಪೂರ್ತಿ ಓದುವುದಷ್ಟೇ ಸಾಕಾಗುವುದಿಲ್ಲ, ಕ್ರೀಡೆ ಕೂಡ ಅಷ್ಟೇ ಮುಖ್ಯ ಎಂದು ರಜತ್ ಕಂಕರ್ ಹೇಳಿದರು. ಉತ್ತಮ ಅಂಕಗಳನ್ನು ಗಳಿಸುವುದಷ್ಟೇ ಗುರಿಯಾಗದೆ, ಕ್ರೀಡೆಯಲ್ಲಿ ಸಹ ತೊಡಗಿಸಬೇಕು ಎಂದು ಅವರು ಕಿವಿ ಮಾತು ಹೇಳಿದರು.ಮಕ್ಕಳ ಆರೋಗ್ಯಕರ ಜೀವನಕ್ಕಾಗಿ ಕೆಲವು ಮುಖ್ಯ ಸಲಹೆ ನೀಡಿದ ರಜತ್ ಕಂಕರ್, ಆರೋಗ್ಯಕ್ಕೆ ಸಮಸ್ಯೆ ತಂದೊಡ್ಡುವ ಆಹಾರ ಬೇಡ, ಮೊಬೈಲ್ ಬಳಕೆ ಕಡಿಮೆ ಮಾಡಬೇಕು,
ಎಂಟು ಗಂಟೆಗಳ ನಿದ್ರೆ ಅವಶ್ಯಕ ಎಂದರು. 21 ದಿನಗಳ ಸಮಾಗಮ ಶಿಬಿರದಲ್ಲಿ 240 ಮಕ್ಕಳು ಭಾಗವಹಿಸಿ, ವಿವಿಧ ಕ್ರೀಡೆ, ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪಿಕಲ್‌ಬಾಲ್, ಬಾಸ್ಕೆಟ್‌ಬಾಲ್, ಕ್ರಿಕೆಟ್, ಹಾಕಿ, ಹ್ಯಾಂಡ್‌ಬಾಲ್, ಟೇಬಲ್ ಟೆನ್ನಿಸ್, ಚದುರಂಗ, ಸ್ಕೆಟ್‌ಬೋರ್ಡಿಂಗ್ ಮತ್ತು ಕರಾಟೆ ಮುಂತಾದ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಅಭಿವೃದ್ಧಿಗೆ ಉತ್ತೇಜನ ನೀಡಿದವು. ಕಲೆ ಮತ್ತು ಕೈಗಾರಿಕಾ ವಿಭಾಗದಲ್ಲಿ ವಿದ್ಯಾರ್ಥಿಗಳು ತಮ್ಮ ಸೃಜನಾತ್ಮಕತೆಯನ್ನು ಪ್ರದರ್ಶಿಸಿದರು. ಮಕ್ಕಳಿಂದ ವಿವಿಧ ಭಂಗಿಯ ಯೋಗಾಭ್ಯಾಸ ಪ್ರದರ್ಶನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ಮೆರುಗು ನೀಡಿದವು. ವಿದ್ಯಾರ್ಥಿಗಳು ಭರತನಾಟ್ಯ ಹಾಗೂ ಬಿಹು ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಮನಸೆಳೆದರು. ಕರಾಟೆ ಪ್ರದರ್ಶನವೂ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ತೋರಿಸಿತು. ಆರ್ಟ್ ಮತ್ತು ಕ್ರಾಫ್ಟ್ ವಿಭಾಗ ಹಾಗೂ ಕಿಡ್ಸ್ ಫೆಸ್ಟ್ ಮಕ್ಕಳಿಂದ ತಯಾರಿಸಲಾದ ವಿವಿಧ ಕಲಾಕೃತಿಗಳ ಪ್ರದರ್ಶನವನ್ನು ಮುಖ್ಯ ಅತಿಥಿಗಳು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಾಲಾ ಪ್ರಾಂಶುಪಾಲರಾದ ಸುಮಿತ್ರ ಕೆ. ಎಸ್., ಆಡಳಿತ ವ್ಯವಸ್ಥಾಪಕ ರವಿ ಪಿ., ಆಡಳಿತ ಮಂಡಳಿ ಸದಸ್ಯರು, ತರಬೇತುದಾರರು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಬಿಂಧು ಕೆ. ಎಚ್ ಶಿಬಿರದ ಕುರಿತು ವರದಿ ವಾಚಿಸಿದರು. ದಕ್ಷ ಎನ್ ನಿರೂಪಿಸಿ, ಅತಿಥಿಗಳ ಪರಿಚಯವನ್ನು ತೃಪ್ತಿ ಟಿ. ಎನ್ ಮಾಡಿದರು. ಶೌರ್ಯ ಪೂಣಚ್ಚ ಸ್ವಾಗತಿಸಿ, ರಾಶಿ ಆರ್ ವಂದಿಸಿದರು.









