
ಮಡಿಕೇರಿ NEWS DESK ಏ.28 : ಉತ್ತರ ಭಾರತದಲ್ಲಿ ತಾನು ಆವರಿಸಿಕೊಂಡಿರುವ ಸ್ಥಾನಗಳನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವುದಕ್ಕಾಗಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇ.50 ರಷ್ಟು ಏರಿಕೆ ಮಾಡಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮುಂದಾಗಿದ್ದು, ದಕ್ಷಿಣ ಭಾರತದ ಬಗ್ಗೆ ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜನಸಂಖ್ಯಾ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಗೆ ಕೇಂದ್ರ ಮುಂದಾಗಿದೆ. ಉತ್ತರ ಭಾರತದಲ್ಲಿ ಶೇ.195 ರಷ್ಟು ಜನಸಂಖ್ಯೆ ಏರಿಕೆಯಾಗಿದ್ದರೆ, ದಕ್ಷಿಣ ಭಾರತದಲ್ಲಿ ಶೇ.135 ರಷ್ಟು ಮಾತ್ರ ಅಧಿಕವಾಗಿದೆ. ಜನಸಂಖ್ಯಾ ಆಧಾರದಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಯಾದರೆ ಉತ್ತರ ಭಾರತದ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳು ಹೆಚ್ಚಾಗಲಿದೆ. ಇದು ಬಿಜೆಪಿಗೆ ಲಾಭವಾಗಲಿದೆ ಎನ್ನುವ ದುರುದ್ದೇಶ ಕೇಂದ್ರದ ಮುಂದಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವ ಸತ್ಯ ಕೇಂದ್ರಕ್ಕೆ ತಿಳಿದಿದೆ ಎಂದು ಟೀಕಿಸಿದರು. ದಕ್ಷಿಣ ಭಾರತವನ್ನು ನಿರ್ಲಕ್ಷಿಸುವ ಮತ್ತು ತಾರತಮ್ಯ ಧೋರಣೆ ಹೊಂದಿರುವ ಮಸೂದೆಗಳನ್ನು ಕಾಂಗ್ರೆಸ್ ವಿರೋಧಿಸಲಿದೆ ಎಂದರು. ಕರ್ನಾಟಕ ರಾಜ್ಯ ತೆರಿಗೆ ರೂಪದಲ್ಲಿ 5ಲಕ್ಷ ಕೋಟಿ ರೂಪಾಯಿಗಳನ್ನು ಕೇಂದ್ರಕ್ಕೆ ನೀಡುತ್ತಿದೆ. ಆದರೆ ಕೇಂದ್ರ ರಾಜ್ಯಕ್ಕೆ ಕೇವಲ 60 ಸಾವಿರ ಕೋಟಿ ಮಾತ್ರ ಮರಳಿ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಹಿಳಾ ಮೀಸಲಾತಿಯನ್ನು ಕಾಂಗ್ರೆಸ್ ಸರಕಾರ ಜಾರಿಗೆ ತಂದಿದ್ದು, 2023 ರಲ್ಲಿ ಮೇಲ್ಮನೆಯಲ್ಲಿ ಮಸೂದೆ ಅಂಗೀಕಾರಗೊoಡಿತು. ಆದರೆ ಕೆಳಮನೆಯಲ್ಲಿ ಬಿಜೆಪಿ ವಿರೋಧ ವ್ಯಕ್ತಪಡಿಸಿತು. ಮಹಿಳಾ ಮೀಸಲಾತಿ ಶೇ.33ಕ್ಕೆ 2023ರಲ್ಲಿ ರಾಷ್ಟ್ರಪತಿಗಳ ಅಂಕಿತವಾಗಿದೆ, ಕೇಂದ್ರ ಸರಕಾರ ಗೆಜೆಟ್ ನೋಟಿಫಿಕೇಷನ್ ನನ್ನು 2026ರಲ್ಲಿ ಹೊರಡಿಸಿದೆ. ಮೂರು ವರ್ಷಗಳ ಕಾಲ ಯಾಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದ ಎಂ.ಲಕ್ಷ್ಮಣ್ , ಮೀಸಲಾತಿ ಎನ್ನುವುದನ್ನೇ ಬಿಜೆಪಿ ಸಹಿಸುವುದಿಲ್ಲ ಎಂದು ವ್ಯಂಗ್ಯವಾಡಿದರು. ಚುನಾವಣೆ ಸಂದರ್ಭ ನೀಡಿದ್ದ ಭರವಸೆಯನ್ನು ಈಡೇರಿಸಿರುವ ರಾಜ್ಯ ಕಾಂಗ್ರೆಸ್ ಸರಕಾರ ಒಳ ಮೀಸಲಾತಿಗಳನ್ನು ಘೋಷಿಸಿದೆ. ಈ ಮೀಸಲಾತಿ ಆಧಾರದಲ್ಲಿ ಸುಮಾರು 53 ಸಾವಿರ ಹುದ್ದೆಗಳು ಭರ್ತಿಯಾಗಲಿವೆ ಎಂದರು.
*ಯೋಜನೆ ತರಲಿ* ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದರು ಎರಡೂ ಜಿಲ್ಲೆಗೆ ಕೇಂದ್ರ ಸರಕಾರದಿಂದ ಯಾವುದೇ ಯೋಜನೆಗಳನ್ನು ತರುತ್ತಿಲ್ಲ, ಸಂಸದರು ಎಲ್ಲಿದ್ದಾರೆ ಎಂದು ಜನ ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಸಂಸದರು ಎಚ್ಚೆತ್ತುಕೊಂಡು ಯೋಜನೆಗಳನ್ನು ತರಲಿ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಒತ್ತಾಯಿಸಿದರು. ಜಿಲ್ಲೆಯ ಎರಡೂ ಕ್ಷೇತ್ರಗಳ ಕಾಂಗ್ರೆಸ್ ಶಾಸಕರು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು, ದಾಖಲೆ ಮೊತ್ತದ ಅನುದಾನ ತಂದಿದ್ದಾರೆ ಎಂದು ಎಂ.ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಹೆಚ್.ಎಂ.ನoದಕುಮಾರ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಡಿಸಿಸಿ ಸದಸ್ಯ ಸಲೀಂ ಹ್ಯಾರಿಸ್, ಹಿಂದುಳಿದ ವರ್ಗಗಳ ಪ್ರಮುಖ ಜಯೇಂದ್ರ ಹಾಗೂ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸೂರಜ್ ಹೊಸೂರು ಉಪಸ್ಥಿತರಿದ್ದರು.








