
ಮಡಿಕೇರಿ NEWS DESK ಮೇ 8 : ಕೊಡ್ಲಿಪೇಟೆ ಬಳಿಯ ಕೋರಗಲ್ಲು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ವಿಗ್ರಹದ ಪುನರ್ ಪ್ರತಿಷ್ಠಾಪನೆ ಹಾಗೂ ದೇವಾಲಯದ ಉದ್ಘಾಟನೆ ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ದೇವಾಲಯಗಳು ಭಾರತೀಯ ನಾಗರೀಕತೆಯ ಸಾಂಸ್ಕ್ರತಿಕವಾದ ಕುರುಹುಗಳು. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶದಲ್ಲಿ ಸರ್ವರ ಸಹಭಾಗಿತ್ವ ಶ್ಲಾಘನೀಯವಾದುದು. ಮನುಷ್ಯನಿಂದಾಗಿರುವ ಪರಿಸರದ ಕಲುಷಿತ ವಾತಾವರಣವೇ ಇಂದಿನ ಹವಾಮಾನಗಳ ವೈರುಧ್ಯಗಳಿಗೆ ಕಾರಣವಾಗಿದೆ. ಹಾಗಾಗಿ ಇನ್ನಾದರೂ ಪರಿಸರವನ್ನು ಸಂರಕ್ಷಿಸುವ ಪಣ ತೊಡಬೇಕಿದೆ ಎಂದು ಶ್ರೀಗಳು ಕರೆಕೊಟ್ಟರು. ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಆಶೀರ್ವಚನದಲ್ಲಿ ಹಳ್ಳಿಗಳು ನಗರಗಳಾಗುತ್ತಿದ್ದು ಮೂಲ ಸಂಸ್ಕೃತಿ ಹಾಗೂ ಸಂಸ್ಕಾರಗಳು ನಾಶವಾಗದಂತೆ ನೋಡಿಕೊಳ್ಳಬೇಕಿದೆ. ಮಕ್ಕಳಿಗೆ ಇಂದು ಸಂಸ್ಕಾರ ತುಂಬಿದ ಶಿಕ್ಷಣ ತುಂಬಾ ಅಗತ್ಯವಿದೆ. ತಾಯಂದಿರು ಮನೆಗಳಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕಲಿಸಲು ಕರೆಕೊಟ್ಟರು. ಸಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಜಿಲ್ಲಾ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಾಂಬಶಿವಯ್ಯ ಮಾತನಾಡಿದರು. ಗ್ರಾಮದ ದೇವಾಲಯ ಸಮಿತಿ ಅಧ್ಯಕ್ಷ ಕೆ.ಪಿ. ಮಲ್ಲಿಕಾರ್ಜುನ, ಉಪಾಧ್ಯಕ್ಷ ಧರ್ಮಪ್ಪ, ಗುರುರಾಜ್, ಕೌಶಿಕ್, ಚಂದ್ರಶೇಖರ್ ಇದ್ದರು. ಬೆಳಗ್ಗೆ ಯಿಂದ ದೇವಾಲಯ ದಲ್ಲಿ ರುದ್ರಾಭಿಷೇಕ, ಕಳಸಾರೋಹಣ, ಬಿಲ್ವಾರ್ಚನೆ, ಪೂರ್ಣಾಹುತಿ, ಪುಷ್ಪಾರ್ಚನೆ, ಮಹಾಮಂಗಳಾರತಿ ನೆರವೇರಿತು. ಗುರುವಾರ ಸಂಜೆ ಗಂಗಾಪೂಜೆಯೊಂದಿಗೆ ಹಸು ಕರು ಹಾಗೂ ಪೂರ್ಣಕುಂಭ ಮೆರವಣಿಗೆ ನಡೆಯಿತು. ಊದ್ದೂರಿನ ರವಿಕುಮಾರ್ ತಂಡದಿಂದ ವೀರಗಾಸೆ ಭಕ್ತರ ಆಕರ್ಷಣೆಯಾಗಿತ್ತು. ಕೊಡ್ಲಿಪೇಟೆಯ ಸೋಮಶೇಖರ ಶಾಸ್ತ್ರಿ ಪೂಜಾ ವಿಧಿಗಳನ್ನು ನೆರವೇರಿಸಿದರು.








