
ಸೋಮವಾರಪೇಟೆ NEWS DESK ಮೇ 8 : : ತಾಲ್ಲೂಕಿನ ಗೋಣಿಮರೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಗ್ರಾಮದೇವತೆ ಬಂಡಿಯಮ್ಮ ದೇವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳ ಕಾಲ ಶ್ರದ್ದಾಭಕ್ತಿಯಿಂದ ನೆರವೇರಿತು. ದೇವತಾ ವಿಗ್ರಹ ಪ್ರತಿಪ್ಠಾಪನೆಯ ಬಳಿಕ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ಮಾಡಿದ ಸದಾಶಿವ ಶ್ರೀಗಳು, ವಿಜ್ಞಾನದ ಜೊತೆ ಧರ್ಮ ಮೇಳೈಸಿರುವ ಹಿಂದೂ ಧರ್ಮ ಜಗತ್ತಿನ ಶ್ರೇಷ್ಠ ಧರ್ಮ. ಮನುಷ್ಯ ಅಂತರಂಗವನ್ನು ಶುಚಿಯಾಗಿ ಇಟ್ಟುಕೊಳ್ಳುವ ಮೂಲಕ ಮಾನಸಿಕ ನೆಮ್ಮದಿ ಪಡೆಯಬೇಕಿದೆ. ಸಜ್ಜನರ ಸಂಘ, ಸದ್ವಿಚಾರಗಳ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಿದೆ. ಪೋಷಕರಲ್ಲಿ ಉತ್ತಮ ಸಂಸ್ಕಾರಗಳಿದ್ದರೆ ಮಕ್ಕಳಲ್ಲೂ ಅದು ಅನೂಚಾನವಾಗಿ ಇರುತ್ತದೆ. ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರಗಳು ಅತಿ ಮುಖ್ಯ ಎಂದರು. ದೇವಾಲಯ ನಿರ್ಮಾಣಕ್ಕಾಗಿ ಶಾಸಕ ಡಾ.ಮಂತರಗೌಡರು ವಿಶೇಷ ಆಸಕ್ತಿ ವಹಿಸಿ ಒಂದು ಲಕ್ಷ ರೂ ಹಾಗೂ ಗ್ರಾಮಸ್ಥರ ಸಹಕಾರವನ್ನು ದೇವತಾ ಸಮಿತಿ ಅಧ್ಯಕ್ಷರಾದ ಸಿದ್ದಪ್ಪ, ಉಪಾಧ್ಯಕ್ಷ ಧರ್ಮಪ್ಪ ಹಾಗೂ ಕಾರ್ಯದರ್ಶಿ ಮೋಹನ್ ಸ್ಮರಿಸಿದರು. ನಿರ್ದೇಶಕರಾದ ಕೆಂಪರಾಜು, ಬಸವಣ್ಣ, ಪುಟ್ಟಪ್ಪ, ತಾರಣ್ಣಯ್ಯ, ರಮೇಶ್, ಮಂಜುನಾಥ ಮೊದಲಾದವರಿದ್ದರು. ಅರ್ಚಕ ಅಣ್ಣಯ್ಯ ಪೂಜಾ ವಿಧಿ ನಡೆಸಿದರು. ಮಹಾಪೂಜೆ, ಮಂಗಳಾರತಿ ಬಳಿಕ ನೆರೆದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.








