
ಮಡಿಕೇರಿ ಮೇ 8 NEWS DESK : ಬ್ರಹ್ಮಕುಮಾರೀಸ್ ಮಡಿಕೇರಿ ಶಾಖೆ ವತಿಯಿಂದ ಮಾದಾಪುರ ಸಮೀಪದ ಜಂಬೂರು ಗ್ರಾಮದ ಸಮುದಾಯ ಭವನದಲ್ಲಿ 15 ವರ್ಷದೊಳಗಿನ ಮಕ್ಕಳಿಗಾಗಿ ಸರ್ವತೋಮುಖ ವ್ಯಕ್ತಿತ್ವ ವಿಕಸನ ಶಿಬಿರ ನಡೆಯಿತು. ಐದು ದಿನಗಳ ಕಾಲ ನಡೆದ ಶಿಬಿರದಲ್ಲಿ ಧ್ಯಾನ, ಪ್ರಾಣಾಯಾಮ, ಯೋಗಾಸನ ಹಾಗೂ ಮೌಲ್ಯಾಧಾರಿತ ಕ್ರೀಡೆ ನಡೆಯಿತು. ಶಿಬಿರವನ್ನು ಬ್ರಹ್ಮಕುಮಾರೀಸ್ ಮಡಿಕೇರಿ ಶಾಖೆಯ ಜಿಲ್ಲಾ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ಗಾಯತ್ರೀಜಿ ಅವರು ಉದ್ಘಾಟಿಸಿ, ಆಶೀರ್ವಚನ ನೀಡಿ ಮಕ್ಕಳಿಗೆ ಉತ್ತಮ ಬದುಕಿನ ದಾರಿಯ ಕುರಿತು ಪ್ರೇರಣಾದಾಯಕ ಮಾತುಗಳನ್ನಾಡಿದರು. ಆಯುರ್ವೇದ ವೈದ್ಯರಾದ ಡಾ.ರಾಜಾರಾಮ್, ಡಾ.ಜ್ಯೋತಿ ಹಾಗೂ ಡಾ.ಪುರುಷೋತ್ತಮ್ ಅವರು ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಔಷಧಿಗಳನ್ನು ವಿತರಿಸಿದರು. ಬಿ.ಕೆ. ಧನಲಕ್ಷ್ಮಿಯವರು ಮಕ್ಕಳಿಗೆ ರಾಜಯೋಗ ಧ್ಯಾನದ ಅಭ್ಯಾಸ ಮಾಡಿಸಿದರೆ, ಆಲಿಮಾ ಅವರು ಯೋಗಾಸನ ಹಾಗೂ ನೃತ್ಯದ ಮೂಲಕ ಮಕ್ಕಳನ್ನು ರಂಜಿಸಿದರು. ನೆನಪಿನ ಶಕ್ತಿ ಹೆಚ್ಚಿಸುವ ಆಟಗಳನ್ನು ದೀಕ್ಷಾ ನಡೆಸಿಕೊಟ್ಟರು. ಬಿಂದು, ಶರ್ಮಿಳ ಹಾಗೂ ರೇವತಿ ಅವರು ಮಕ್ಕಳಿಗೆ ಜೀವನ ಮೌಲ್ಯಗಳ ಕುರಿತು ಕಿವಿಮಾತು ಹೇಳಿದರು. ಸುರೇಶ್ ಕಾರಂತ್ ಹಾಗೂ ಪೆರುಮಾಳ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು. ಪತ್ರಕರ್ತ ರಂಜಿತ್ ಕವಲಪಾರ ಜಂಬೂರು ಬಾಣೆಯ ವಾತಾವರಣ ಹಾಗೂ ಜನ ಜೀವನದ ಕುರಿತು ಮಾತನಾಡಿದರು. ಗ್ರಾಮಸ್ಥೆ ಸೈರಾ ಹಾಗೂ ಇತರರು ಉಪಸ್ಥಿತರಿದ್ದರು. ನೂರಕ್ಕು ಅಧಿಕ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗಿಯಾಗಿದ್ದರು.









