
ಮಡಿಕೇರಿ NEWS DESK ಮೇ 11 : ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಗ್ರಾ.ಪಂ ವ್ಯಾಪ್ತಿಯ ಕುಂಬೂರು ಗ್ರಾಮದಲ್ಲಿ ಲಭ್ಯವಿರುವ ಪೈಸಾರಿ ಜಾಗವನ್ನು ಸ್ಥಳೀಯ ಅರ್ಜಿದಾರರಿಗೆ ಮಾತ್ರ ಹಂಚಿಕೆ ಮಾಡಬೇಕೆಂದು ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಹಾಗೂ ಎಐಟಿಯುಸಿ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಬೇರೆ ಬೇರೆ ಗ್ರಾ.ಪಂ ವ್ಯಾಪ್ತಿಯ ಫಲಾನುಭವಿಗಳಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಬಹುಜನ ಕಾರ್ಮಿಕ ಸಂಘ ಲಕ್ಕೇರಿ ಪೈಸಾರಿಯಲ್ಲಿ ಕಳೆದ 9 ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಅರ್ಥಹೀನವಾಗಿದ್ದು, ಯಾವುದೇ ಕಾರಣಕ್ಕೂ ಮಾದಾಪುರ ಗ್ರಾ.ಪಂ ವ್ಯಾಪ್ತಿಯ ಅರ್ಜಿದಾರರನ್ನು ಹೊರತು ಪಡಿಸಿ ಬೇರೆಯವರಿಗೆ ನಿವೇಶನ ನೀಡಬಾರದೆಂದು ಒತ್ತಾಯಿಸಿದರು. ಕುಂಬೂರು ಗ್ರಾಮದ ಸರ್ವೆ ಸಂಖ್ಯೆ 125/1 ರಲ್ಲಿ ಲಭ್ಯವಿರುವ ಪೈಸಾರಿ ಜಾಗವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರರಿಗೆ ನಿವೇಶನದ ರೂಪದಲ್ಲಿ ಮಂಜೂರಾತಿ ಮಾಡಬೇಕೆಂದು ಕೋರಿ ಕಳೆದ 20 ವರ್ಷಗಳಿಂದ ಅರ್ಹರು ಅರ್ಜಿ ಸಲ್ಲಿಸುತ್ತಾ ಬಂದಿದ್ದಾರೆ. ಅಲ್ಲದೆ ನಿರಂತರ ಪ್ರತಿಭಟನೆಗಳನ್ನು ನಡೆಸಿ ರಾಜ್ಯ ಸರಕಾರದ ಗಮನ ಸೆಳೆಯಲಾಗಿದೆ. 2024 ರಲ್ಲಿ ಮಡಿಕೇರಿಯಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಕೂಡ ಮನವಿಯನ್ನು ಸಲ್ಲಿಸಲಾಗಿದೆ. ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಿ ನಿವೇಶನ ಮಂಜೂರಾತಿಗೆ ಕೋರಿಕೊಳ್ಳಲಾಗಿದೆ. ಸೋಮವಾರಪೇಟೆಯಲ್ಲಿ ಇತ್ತೀಚೆಗೆ ನಡೆದ ಕುಂದುಕೊರತೆಗಳ ಜನ ಸ್ಪಂದನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೂ ಖುದ್ದಾಗಿ ಮನವಿಯನ್ನು ಸಲ್ಲಿಸಿದ್ದೇವೆ. ಈ ರೀತಿಯಾಗಿ ನಿರಂತರವಾಗಿ ನಿವೇಶನ ರಹಿತರ ಪರವಾಗಿ ಹೋರಾಟಗಳನ್ನು ನಡೆಸುತ್ತಾ ಮತ್ತು ಮನವಿಯನ್ನು ಸಲ್ಲಿಸುತ್ತಾ ಬರಲಾಗಿದೆ. ಮಾದಾಪುರ ಗ್ರಾ.ಪಂ ವ್ಯಾಪ್ತಿಯ 500 ಕ್ಕೂ ಅಧಿಕ ಅರ್ಜಿದಾರರು ನಿವೇಶನ ಲಭಿಸುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಬಹುಜನ ಕಾರ್ಮಿಕ ಸಂಘ ಲಕ್ಕೇರಿ ಪೈಸಾರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದು ಜನರ ಹಾದಿ ತಪ್ಪಿಸುವ ಯತ್ನವಾಗಿದೆ. ಕಳೆದ 30- 40 ವರ್ಷಗಳಿಂದ 15 ರಿಂದ 20 ಕುಟುಂಬಗಳು ಲಕ್ಕೇರಿ ಪೈಸಾರಿಯಲ್ಲಿ ನೆಲೆ ನಿಂತು ಉಪ ಕೃಷಿ ಕಾರ್ಯ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಬಡ ಕುಟುಂಬಗಳು ತಮ್ಮ ಸ್ವಾಧೀನದಲ್ಲಿರುವ ಜಾಗದ ಆರ್‌ಟಿಸಿಯನ್ನು ಹೊಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಚೆಸ್ಕಾಂ ಇಲಾಖೆ 13 ಕೆ.ವಿ ಸಾಮರ್ಥ್ಯದ ವಿದ್ಯುತ್ ಮಾರ್ಗ ಇದೇ ಪ್ರದೇಶದಿಂದ ಹಾದು ಹೋಗುತ್ತದೆ ಎಂದು ಮುನ್ಸೂಚನೆ ನೀಡಿದೆ. ಅಲ್ಲದೆ ಈಗ ವಾಸಿಸುತ್ತಿರುವ ಕುಟುಂಬಗಳು ಈ ಪ್ರದೇಶದಲ್ಲಿ ಯಾವುದೇ ಕೃಷಿ ಚಟುವಟಿಕೆ ನಡೆಸಬಾರದೆಂದು ನಿರ್ದೇಶನ ನೀಡಿದೆ ಮತ್ತು ಮರಗಳನ್ನು ಬೆಳೆಸಬಾರದೆಂದು ತಿಳಿಸಿದೆ. ಈ ರೀತಿಯ ಗೊಂದಲದ ವಾತಾವರಣ ಇರುವ ಸಂದರ್ಭದಲ್ಲಿ ಅದೇ ಜಾಗವನ್ನು ನಿವೇಶನವನ್ನಾಗಿ ನೀಡಬೇಕೆಂದು ಬಹುಜನ ಕಾರ್ಮಿಕ ಸಂಘ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ. ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಪ್ರತಿಭಟನೆಗೆ ಮಣಿದು ನಿವೇಶನ ನೀಡಲು ಮುಂದಾದರೆ ಇದಕ್ಕೆ ನಮ್ಮ ವಿರೋಧವಿದೆ ಎಂದು ತಿಳಿಸಿದ ಹೆಚ್.ಎಂ.ಸೋಮಪ್ಪ, ಸ್ಥಳೀಯರಿಗೆ ನಿವೇಶನ ನೀಡಬೇಕು ಮತ್ತು ಇಲ್ಲಿ ಈಗಾಗಲೇ ನೆಲೆ ನಿಂತಿರುವ ಸಣ್ಣ ಹಿಡುವಳಿದಾರರಿಗೆ ಹಕ್ಕುಪತ್ರ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.
ಬಡವರು ನೀಡಿರುವ ಅರ್ಜಿಗಳನ್ನು ಕಂದಾಯ ಅಧಿಕಾರಿಗಳು ತಕ್ಷಣ ಪರಿಶೀಲಿಸಿ ನಿವೇಶನ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ವಿದ್ಯುತ್ ಮಾರ್ಗ ಅಡ್ಡಿಯಾದರೆ ಮಾದಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಲಭ್ಯವಿರುವ ಪರ್ಯಾಯ ಪೈಸಾರಿ ಜಾಗವನ್ನು ಗುರುತಿಸಿ ನಿವೇಶನ ನೀಡಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಸಂಘಟನೆಯ ಕಾರ್ಯಕರ್ತರಾದ ಫಿಲೋಮಿನಾ ಡಿಸೋಜ, ಶಾಂತಿ ಯೋಗೇಶ್, ಪಾರ್ವತಿ ಮಂಜು ಹಾಗೂ ಲತಾ ಕೊರಗಪ್ಪ ಉಪಸ್ಥಿತರಿದ್ದರು.









